ವರ್ಕ್ಲೋಡ್ ಮ್ಯಾನೇಜ್ಮೆಂಟ್ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹಲವು ಪಂದ್ಯಗಳಿಂದ ಹೊರಗುಳಿಯುತ್ತಿದ್ದಾರೆಂದು ವರದಿಯಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ತಂಡವನ್ನು ಮುನ್ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ನೀರಸ ಪ್ರದರ್ಶನ ತೋರಿತ್ತು. ಈ ಹಿನ್ನೆಲೆಯಲ್ಲಿ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದೊಂದಿಗೆ ತನ್ನ ಟೂರ್ನಿಯ ಅಭಿಯಾನವನ್ನು ಮುಗಿಸಿತ್ತು. ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡ 2022ರ ಟೂರ್ನಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ.
ಐದು ಬಾರಿ ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಕಳೆದ ಟೂರ್ನಿಯಲ್ಲಿ ಆಡಿದ್ದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು, ಇನ್ನುಳಿದ 10ರಲ್ಲಿ ಸೋಲು ಅನುಭವಿಸಿತ್ತು. ಈ ಬಾರಿ ಜಸ್ಪ್ರೀತ್ ಬುಮ್ರಾ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಅಲಭ್ಯರಾಗಿದ್ದಾರೆ. ಮತ್ತೊಂದೆಡೆ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಹಲವು ಪಂದ್ಯಗಳಿಂದ ದೂರ ಉಳಿಯಲಿದ್ದಾರೆಂದು ವರದಿಯಾಗಿದೆ.
ಪ್ರಸಕ್ತ ವರ್ಷದಲ್ಲಿ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್, 2023ರ ಏಷ್ಯಾ ಕಪ್ ಟೂರ್ನಿ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರನ್ನು ಐಪಿಎಲ್ ಟೂರ್ನಿಯ ಹಲವು ಪಂದ್ಯಗಳಿಂದ ದೂರ ಇಡಲಾಗುತ್ತಿದೆ.
ರೋಹಿತ್ ಶರ್ಮಾ ಹೊರಗುಳಿಯುವ ಕೆಲ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆಂದು ಉನ್ನತ ಮೂಲಗಳನ್ನು ತಿಳಿಸಿರುವುದನ್ನು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಇತ್ತೀಚಿನ ವರದಿ ಪ್ರಕಾರ, 2023ರ ಐಪಿಎಲ್ ಟೂರ್ನಿಯಲ್ಲಿ ಯಾವ ಪಂದ್ಯಗಳಲ್ಲಿ ಆಡಬೇಕು ಅಥವಾ ಯಾವ ಪಂದ್ಯಗಳಲ್ಲಿ ಆಡಬಾರದು ಎಂಬುದನ್ನು ಸ್ವತಃ ರೋಹಿತ್ ಶರ್ಮಾ ಅವರೇ ನಿರ್ಧರಿಸಲಿದ್ದಾರೆ.
ಇದರ ಹೊರತಾಗಿಯೂ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದ ಜೊತೆಯಲ್ಲಿರುತ್ತಾರೆ. ಆ ಮೂಲಕ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಮಹತ್ವದ ಸಲಹೆಗಳನ್ನು ನೀಡಲಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಿದ್ದ 14 ಪಂದ್ಯಗಳಿಂದ ಕೇವಲ 19.14ರ ಸರಾಸರಿಯಲ್ಲಿ 268 ರನ್ ಗಳಿಸಿದ್ದರು. ಆದರೆ, ರೋಹಿತ್ ಶರ್ಮಾ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಆಡಿದ್ದ 8 ಪಂದ್ಯಗಳಿಂದ 303 ರನ್ ಸಿಡಿಸಿದ್ದರು. ಇವರು ಗಾಯದಿಂದ 2022ರ ಟೂರ್ನಿಯಲ್ಲಿ ಎಲ್ಲಾ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.