ಒಡೆಸಾ ಪ್ರಾಂತದ ಕಪ್ಪು ಸಮುದ್ರದಲ್ಲಿ ವಿದೇಶಿ ಸರಕು ಹಡಗನ್ನು ಉಕ್ರೇನ್ ವಶಪಡಿಸಿಕೊಂಡಿದ್ದು ಹಡಗಿನ ಕ್ಯಾಪ್ಟನ್ನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರಶ್ಯವು ಉಕ್ರೇನ್ ನಿಂದ ಲೂಟಿ ಮಾಡಿದ್ದ ಆಹಾರ ಧಾನ್ಯಗಳನ್ನು ವಿದೇಶಕ್ಕೆ ರಫ್ತು ಮಾಡಲು ನೆರವಾಗುತ್ತಿದ್ದ ಶಂಕೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಕ್ರೇನ್ ನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಆಫ್ರಿಕಾ ದೇಶದ ಧ್ವಜವನ್ನು ಹೊಂದಿದ್ದ ಈ ಹಡಗು ಪದೇ ಪದೇ ಕ್ರಿಮಿಯಾದ ಬಂದರು ನಗರ ಸೆವಾಸ್ಟೊಪೊಲ್ ನಲ್ಲಿ ತಂಗುತ್ತಿರುವುದನ್ನು ಪತ್ತೆಹಚ್ಚಲಾಗಿದೆ. 2023-24ರ ಅವಧಿಯಲ್ಲಿ ಉಕ್ರೇನ್ನಿಂದ ಲೂಟಿ ಮಾಡಲಾದ ಕೃಷಿ ಉತ್ಪನ್ನಗಳನ್ನು ಈ ಹಡಗಿನಲ್ಲಿ ಸಾಗಿಸಿರುವ ಶಂಕೆಯಿದ್ದು ಈ ಹಿನ್ನೆಲೆಯಲ್ಲಿ ಹಡಗನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ದಕ್ಷಿಣ ಉಕ್ರೇನ್ನ ಪ್ರಮುಖ ಕೃಷಿ ಪ್ರಾಂತಗಳಲ್ಲಿ 2022ರಲ್ಲಿ ರಶ್ಯದ ಪಡೆಗಳು ವಶಪಡಿಸಿಕೊಂಡ ಬಳಿಕ ತನ್ನ ಕೃಷಿ ಉತ್ಪನ್ನಗಳನ್ನು ಲೂಟಿ ಮಾಡುತ್ತಿವೆ ಅಥವಾ ನಾಶಗೊಳಿಸುತ್ತಿವೆ ಎಂದು ಉಕ್ರೇನ್ ಆರೋಪಿಸುತ್ತಿದೆ. ಹೀಗೆ ಲೂಟಿ ಮಾಡಲಾದ ಆಹಾರ ಧಾನ್ಯಗಳನ್ನು ಮಧ್ಯಪ್ರಾಚ್ಯಕ್ಕೆ ರಫ್ತು ಮಾಡಲು ಅಥವಾ ರಶ್ಯದ ಪರವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನೆರವಾಗುತ್ತಿದ್ದ ಶಂಕೆಯಲ್ಲಿ ಹಡಗಿನ ಕ್ಯಾಪ್ಟನ್ ಮತ್ತು 12 ಸಿಬ್ಬಂದಿಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆಯ ಬಳಿಕ ಆರೋಪ ಸಾಬೀತಾದರೆ ದಕ್ಷಿಣ ಕಾಕಸಸ್ ದೇಶದ ಪ್ರಜೆಯಾಗಿರುವ ಹಡಗಿನ ಕ್ಯಾಪ್ಟನ್ ರಶ್ಯ ವಶಕ್ಕೆ ಪಡೆದಿರುವ ಉಕ್ರೇನ್ ಪ್ರಾಂತಕ್ಕೆ ಸಂಬಂಧಿಸಿದ ಪ್ರಯಾಣ ನಿರ್ಬಂಧಗಳನ್ನು ಉಲ್ಲಂಘಿಸಿದ ಅಪರಾಧಕ್ಕೆ 5 ವರ್ಷದವರೆಗೆ ಜೈಲುಶಿಕ್ಷೆಗೆ ಒಳಗಾಗಬಹುದು ಎಂದು ಮೂಲಗಳು ಹೇಳಿವೆ.