ಬೆಂಗಳೂರು:- ಬಳ್ಳಾರಿ ಜೈಲಲ್ಲೇ ಕುಳಿತು ಬೆಂಗಳೂರು ಸ್ಫೋಟಕ್ಕೆ ಸಂಚು ಹೂಡಿದ್ದ ಶಂಕಿತ ಉಗ್ರ ಎನ್ಐಎ ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ನನ್ನು ಎನ್ಐಎ ವಶಕ್ಕೆ ಪಡೆದಿದೆ. ಎರಡು ದಿನಗಳಿಂದ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸುಲೇಮಾನ್ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಸುಳಿವು ಆಧರಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈತ ಬಳ್ಳಾರಿಯ ಕೌನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ.
ಸುಲೇಮಾನ್ಗೆ ಐಸಿಸ್ ಉಗ್ರರ ಜತೆ ಸಂಪರ್ಕ ಇತ್ತು. ಈತ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡುತ್ತಿದ್ದ. 2023 ರ ಡಿಸೆಂಬರ್ 18 ರಂದು ಎನ್ಐಎ ಅಧಿಕಾರಿಗಳು ಮಿನಾಜ್ನನ್ನು ಬಂಧಿಸಿದ್ದರು. ಬಳಿಕ ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು.
ಮಹತ್ವದ ಸುಳಿವು ಆಧರಿಸಿ ಮಾರ್ಚ್ 6 ರಂದೇ ಶಂಕಿತ ಉಗ್ರ ಮಿನಾಜ್ನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ನಂತರ ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.