ಅಮೆರಿಕದ ಆರ್ಥಿಕ ತಜ್ಞರಾದ ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಹಾಗೂ ಜೇಮ್ಸ್ ಎ ರಾಬಿನ್ಸನ್ ಅವರಿಗೆ 2024ನೇ ಸಾಲಿನ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಇದು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೂ ಕರೆಯಲ್ಪಡುವ ಈ ರಿಕ್ಸ್ ಬ್ಯಾಂಖ್ ಪ್ರಶಸ್ತಿ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ನಿಂದ ನೀಡಲಾಗುವ ಪ್ರಶಸ್ತಿಯಾಗಿದೆ.
ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಹಾಗೂ ಜೇಮ್ಸ್ ಎ ರಾಬಿನ್ಸನ್ ಅವರು ಸಾಮಾಜಿಕ ಸಂಸ್ಥೆಗಳು ಹೇಗೆ ರಚನೆ ಆಗುತ್ತವೆ, ಅವುಗಳಿಂದ ಪ್ರಗತಿ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಎಂಬುದನ್ನು ತಮ್ಮ ಅಧ್ಯಯನಗಳಿಂದ ವಿವರಿಸಿದ್ದರು. ಅವರ ಈ ಸಾಧನೆಗಾಗಿ ನೊಬೆಲ್ ಪುರಸ್ಕಾರ ನೀಡಲಾಗುತ್ತಿದೆ.
ಆಲ್ಫ್ರೆಡ್ ನೊಬೆಲ್ ಎಂಬ ಸ್ವೀಡಿಶ್ ವಿಜ್ಞಾನಿಯಾಗಿದ್ದು ಅವರ ಸಾವಿನ ನಂತರ ಅವರ ಅಭಿಲಾಷೆಯಂತೆ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಈ ಐದು ವಿಭಾಗಗಳಲ್ಲಿ ಸಾಧಕರಿಗೆ ನೊಬೆಲ್ ಬಹುಮಾನ ನೀಡುತ್ತಾ ಬರಲಾಗಿದೆ. ಆದರೆ, ಸ್ವೀಡನ್ನ ಸ್ವೆರಿಗೆಸ್ ರಿಕ್ಸ್ಬ್ಯಾಂಕ್ 1969ರಿಂದ ಆರ್ಥಿಕ ವಿಜ್ಞಾನ ವಿಭಾಗದಲ್ಲೂ ಪ್ರಶಸ್ತಿ ನೀಡುತ್ತಿದೆ. ಇದಕ್ಕೆ ನೊಬೆಲ್ ಫೌಂಡೇಶನ್ನ ಅನುಮೋದನೆ ಇದೆಯಾದ್ದರಿಂದ ನೊಬೆಲ್ ಬಹುಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ, ಇದು ಅಧಿಕೃತ ನೊಬೆಲ್ ಪುರಸ್ಕಾರ ಎನಿಸಿಕೊಂಡಿಲ್ಲ.
2024ರ ಸಾಲಿನ ಎಕನಾಮಿಕ್ಸ್ ನೊಬೆಲ್ ಬಹುಮಾನ ಪಡೆದ ಡಾರೋನ್ ಅಸೆಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ರಾಬಿನ್ಸನ್ ಈ ಮೂವರೂ ಕೂಡ ಅಮೆರಿಕನ್ ಆರ್ಥಿಕತಜ್ಞರಾಗಿದ್ದಾರೆ. ಡೆರನ್ ಮತ್ತು ಸಿಮೋನ್ ಜಾನ್ಸನ್ ಅವರು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧಕರಾಗಿದ್ದಾರೆ. ಜೇಮ್ಸ್ ಎ ರಾಬಿನ್ಸನ್ ಅವರು ಚಿಕಾಗೋ ಯೂನಿವರ್ಸಿಟಿಯಲ್ಲಿ ರಿಸರ್ಚ್ ನಡೆಸುತ್ತಾರೆ.
ವಿವಿಧ ದೇಶಗಳ ನಡುವೆ ಶ್ರೀಮಂತಿಕೆಯಲ್ಲಿ ಯಾಕೆ ದೊಡ್ಡ ಅಂತರ ಇದೆ ಎನ್ನುವ ಪ್ರಶ್ನೆ ಇಟ್ಟುಕೊಂಡು ಈ ಮೂವರು ಆರ್ಥಿಕ ತಜ್ಞರು ಸಂಶೋಧನೆ ನಡೆಸಿದ್ದಾರೆ. ಸಾಮಾಜಿಕ ಸಂಸ್ಥೆಗಳ ರಚನೆಯ ಸ್ವರೂಪ ಮತ್ತು ಅವುಗಳಿಂದ ಆರ್ಥಿಕ ಬೆಳವಣಿಗೆಯ ಮೇಲಾಗುವ ಪರಿಣಾಮ, ಇವುಗಳನ್ನು ತಮ್ಮ ಸಂಶೋಧನೆಯಲ್ಲಿ ವಿವರಿಸಿದ್ದಾರೆ.
ಒಂದು ದೇಶದ ಸಮೃದ್ಧಿಗೆ ಸಾಮಾಜಿಕ ಸಂಸ್ಥೆಗಳ ಮಹತ್ವ ಏನು ಎಂಬುದನ್ನು ಅವರು ಮೂರು ಪ್ರಮುಖ ಅಂಶಗಳಲ್ಲಿ ವಿವರಿಸಿದ್ದಾರೆ. ಸಮಾಜದಲ್ಲಿ ಸಂಪನ್ಮೂಲಗಳು ಹೇಗೆ ನಿಯೋಜನೆ ಆಗುತ್ತವೆ. ಅವುಗಳನ್ನು ನಿರ್ಧರಿಸುವ ಅಧಿಕಾರ ಯಾರಿಗೆ ಇರುತ್ತದೆ ಎನ್ನುವುದು ಮೊದಲ ಅಂಶ. ಜನಸಮುದಾಯದವರು ಒಗ್ಗೂಡಿ, ಆಡಳಿತಾರೂಢ ವರ್ಗಕ್ಕೆ ಸೆಡ್ಡು ಹೊಡೆಯುವ ಅಧಿಕಾರ ಬಳಸುವುದು ಎರಡನೇ ಅಂಶವಾಗಿದ್ದು ಇನ್ನೂ ಮೂರನೇ ಅಂಶ, ಅಧಿಕಾರ ಅನುಭವಿಸುವ ಮೇಲ್ಮಟ್ಟದ ಜನರು ಸಂಪನ್ಮೂಲ ಹಂಚಿಕೆಯ ಅಧಿಕಾರವನ್ನು ಜನಸಾಮಾನ್ಯರಿಗೆ ಒಪ್ಪಿಸುವ ಅನಿವಾರ್ಯ ಸ್ಥಿತಿ ಬರುವುದಾಗಿದೆ. ಈ ಮೇಲಿನ ಮೂರು ಅಂಶಗಳು ಒಂದು ದೇಶದ ಸಮೃದ್ಧತೆಯ ಮೇಲೆ ಪರಿಣಾಮ ಬೀರಬಲ್ಲುದು ಎನ್ನುವ ಥಿಯರಿಯನ್ನು ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಮತ್ತು ಜೇಮ್ಸ್ ಎ ರಾಬಿನ್ಸನ್ ಅವರು ತಮ್ಮ ಅಧ್ಯಯನದಲ್ಲಿ ನಿರೂಪಿಸಿದ್ದಾರೆ. ಈ ಅಧ್ಯಯನಕ್ಕೆ ಇದೀಗ ರಿಕ್ಸ್ ಬ್ಯಾಂಕ್ ಪ್ರಶಸ್ತಿ ನೀಡಲಾಗಿದೆ.