“ ನಿರ್ಮಾಲಾನಂದನಾಥ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಗೊತ್ತಿರುವ ವಿಚಾರ, ಈ ಬಗ್ಗೆ ದಾಖಲೆಗಳಿವೆ ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು. ಕುಮಾರಸ್ವಾಮಿ ಅವರು ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದರು ಎಂಬ ಸಚಿವ ಚೆಲುವರಾಯಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಪ್ರಶ್ನೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, “ ಇದು ಗೊತ್ತಿರುವ ವಿಚಾರವೇ. ಈ ಬಗ್ಗೆ ಮಾತನಾಡಲು ನೋವಾಗುತ್ತದೆ.
ಈ ವಿಚಾರವಾಗಿ ಎಲ್ಲಾ ದಾಖಲೆಗಳು ಇವೆ. ಆದರೂ ಈ ವಿಚಾರವನ್ನು ಈಗ ಮಾತನಾಡುವುದು ಸೂಕ್ತವಲ್ಲ, ಮುಂದೆ ಮಾತನಾಡುತ್ತೇನೆ ” ಎಂದು ಡಿಸಿಎಂ ಉತ್ತರಿಸಿದರು. ಆದಿಚುಂಚನಗಿರಿ ಶ್ರೀಗಳ ಪೋನ್ ಟ್ಯಾಪಿಂಗ್ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಮಾಡಿರುವ ಆರೋಪದ ಬಗ್ಗೆ ತೀಕ್ಷ್ಣವಾಗಿ ಉತ್ತರಿಸಿದ ಕುಮಾರಸ್ವಾಮಿ ಅವರು, ” ನಾನು ಫೋನ್ ಟ್ಯಾಪಿಂಗ್ ಮಾಡಿಕೊಳ್ಳುತ್ತಿದ್ದರೆ ನನ್ನ ಸರ್ಕಾರವನ್ನು ಯಾಕೆ ಬೀಳಿಸಿಕೊಳ್ಳುತ್ತಿದ್ದೆ? ಅವರು ತನಿಖೆ ಮಾಡಿಕೊಳ್ಳಲಿ,
ಈವರೆಗೆ ತನಿಖೆ ಮಾಡಿದರಲ್ಲ, ಅದು ಏನಾಯಿತು? ಎಂದು ತರಾಟೆಗೆ ತೆಗೆದುಕೊಂಡರು. ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಮಠ ಮಾಡಿದರು ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಎಚ್ಡಿಕೆ, ಬೇರೆ ಸಮುದಾಯಗಳಲ್ಲೂ ಎಷ್ಟು ಮಠಗಳಿಲ್ಲ? ನಮ್ಮ ಸಮುದಾಯದಲ್ಲೂ ಅಂಥ ಬೆಳವಣಿಗೆ ಆಗಲಿ ಎಂದು ಇನ್ನೊಬ್ಬರಿಗೂ ಸಹಾಯ ಮಾಡಿದ್ದೆವೆ. ಅದರಲ್ಲಿ ಏನಿದೆ? ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕಾ? ಎಂದು ಕೇಳಿದರು.