ಬಾಂಗ್ಲಾದೇಶದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಸೈಯದ್ ರೆಫಾತ್ ಅಹ್ಮದ್ ಪ್ರಮಾಣವಚನ ಸ್ವೀಕರಿಸಿದರು. ಒಬೈದುಲ್ ಹಸನ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ದಿನದ ಬಳಿಕ ಸೈಯದ್ ರೆಫಾತ್ ಅಹ್ಮದ್ ದೇಶದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮುಖ್ಯ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸಂಪುಟ ಕಾರ್ಯದರ್ಶಿ ಮಹೆಬೂಬ್ ಹೊಸೈನ್ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಡೆಸಿಕೊಟ್ಟರು ಎಂದು ವರದಿ ತಿಳಿಸಿದೆ. ಶೇಕ್ ಹಸೀನಾ ಪದಚ್ಯುತಿ ನಂತರ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ಪ್ರೊ.ಮುಹಮ್ಮದ್ ಯೂನಸ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಅಧ್ಯಕ್ಷ ಶಹಾಬುದ್ದೀನ್ ಶನಿವಾರ ನ್ಯಾಯಮೂರ್ತಿ ಅಹ್ಮದ್ ಅವರನ್ನು ಬಾಂಗ್ಲಾದೇಶದ 25 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಇತರ ಪ್ರತಿಭಟನಾಕಾರರ ಹೊಸ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಢಾಕಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಡಾ ಮಕ್ಸುದ್ ಕಮಾಲ್ ಮತ್ತು ಬಾಂಗ್ಲಾ ಅಕಾಡೆಮಿ ಮಹಾನಿರ್ದೇಶಕ ಪ್ರೊಫೆಸರ್ ಡಾ ಎಂಡಿ ಹರುನ್-ಉರ್-ರಶೀದ್ ಅಸ್ಕಾರಿ ಸೇರಿದಂತೆ ಬಾಂಗ್ಲಾದೇಶದ ಹಲವಾರು ಉನ್ನತ ಅಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.