ಮಂಡ್ಯ :- ದೇಶದ ಸಂವಿಧಾನವನ್ನು ಬದಲಾವಣೆ ಮಾಡಲು ಯತ್ನಿಸುತ್ತಿರುವ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ ಸರ್ವ ಜನಾಂಗದ ಸಮಾನತೆಗಾಗಿ ಶ್ರಮಿಸುವ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮನವಿ ಮಾಡಿದರು. ಮದ್ದೂರು ವಿಧಾನ ಸಭಾ ಕ್ಷೇತ್ರದ ಆತಗೂರು ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಶ್ರೀ ಕೃಷ್ಣ ದೇವಾಲಯ (ಶ್ರೀ ಜುಂಜಪ್ಪ) ದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವದಲ್ಲೇ ಅತೀ ಶ್ರೇಷ್ಠವಾದ ನಮ್ಮ ಸಂವಿಧಾನವನ್ನು ಬಿಜೆಪಿ ಪಕ್ಷದ ನಾಯಕರುಗಳು ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇವರ ಜೊತೆಗೆ ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್ ಕೂಡ ಇಂತಹ ಹೇಳಿಕೆಯನ್ನು ವಿರೋಧಿಸದೆ ಆ ಪಕ್ಷಕ್ಕೆ ಬೆಂಬಲವಾಗಿ ನಿಂತಿದೆ ಎಂದು ಕಿಡಿಕಾರಿದರು.
ಮದ್ದೂರು ಕ್ಷೇತ್ರದಲ್ಲಿ ಅತೀ ಹೆಚ್ಚು ಹಿಂದುಳಿದ ವರ್ಗಗಳ ಜನರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಸಂವಿಧಾನವನ್ನು ಬದಲಾವಣೆ ಮಾಡಿದರೆ ನಮ್ಮ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಲಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಪರ ಜನತೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿಲ್ಲದೇ ಪಕ್ಷದ ನಾಯಕರ ಮೇಲೆ ಸಾಕಷ್ಟು ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಹೀಗಾಗಿ ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಕೊನೆಯಾಗಲು ಮತದಾರರು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿಯುವಂತೆ ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ಮನವಿ ಮಾಡಿದರು.
ರಾಜ್ಯ ಮತ್ತು ದೇಶದಲ್ಲಿ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಅನಾವಶ್ಯಕವಾಗಿ ಬೆಲೆ ಏರಿಕೆ ಮಾಡುತ್ತ ತೆರಿಗೆ ಹಣವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಜನಪರ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಹೇಳಿದರು. ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜನರ ಹಿತ ಕಾಪಾಡುವಲ್ಲಿ ವಿಫಲವಾಗಿವೆ ಹೀಗಾಗಿ ರಾಜ್ಯದ ಜನರು ಈ ಬಾರಿ ಬದಲಾವಣೆ ಬಯಸಿದ್ದು, ಚುನಾವಣೆಯಲ್ಲಿ 100ಕ್ಕೆ 100 ರಷ್ಟು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಭ್ಯರ್ಥಿ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ತಾ.ಪಂ ಮಾಜಿ ಸದಸ್ಯರಾದ ಚಲುವರಾಜು, ಕೆ.ಆರ್.ಮಹೇಶ್ ಮುಖಂಡರಾದ ಕೆ.ಟಿ.ರಾಜಣ್ಣ, ವಿನಯ್ ರಾಮಕೃಷ್ಣ, ಶಂಕರಲಿಂಗಯ್ಯ, ಬಿಳಿಯಪ್ಪ, ಸತೀಶ್, ನಾಗಭೂಷಣ್, ಕುಮಾರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ