ಬೆಂಗಳೂರು: ರಾಮನಗರ ಮತ್ತು ಬಂಡೀಪುರದಲ್ಲಿ ಆನೆ ದಾಳಿಯಿಂದ 2 ಮಂದಿ ಸಾವನ್ನಪ್ಪಿರುವುದಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಬಾರದು.
ಇನ್ನು ಮುಂದೆ ಪ್ರಾಣಿಗಳ ಮತ್ತು ಮಾನವನ ಸಂಘರ್ಷದಿಂದ ಹೆಚ್ಚಿನ ಜೀವ ಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ನಾಡಿಗೆ ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಮೃತರಾದ ವೀರಭದ್ರ ಮತ್ತು ರವಿಯವರ ಕುಟುಂಬಕ್ಕೆ ನಿಯಮಾನುಸಾರ 15 ಲಕ್ಷ ರೂ. ಪರಿಹಾರವನ್ನು ಒದಗಿಸಲಾಗುವುದು. ಯಾವುದೇ ಪರಿಹಾರ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ಅವರ ಕುಟುಂಬಕ್ಕೆ ಆಸರೆ, ಆಧಾರವಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ. ಮೃತರಿಬ್ಬರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.