2024 ರ ಲೋಕಸಭಾ ಚುನಾವಣೆ ಏಪ್ರಿಲ್ 26 ಕರ್ನಾಟಕದಲ್ಲಿ ನಡೆಯಲಿದ್ದು, ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದರೆ ಈ ಸುದ್ದಿ ಪೂರ್ತಿ ಓದಿ..
ಬೂತ್ಗಳ ಆವರಣದಲ್ಲಿ ಮೊಬೈಲ್ ಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಬೂತ್ಗಳಿಗೆ ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು. ಮತದಾರರು ಮತ ಚಲಾಯಿಸಲು ಹೋಗುವ ಮೊದಲು ಫೋನ್ಗಳನ್ನು ಇಡಲು ವಿಶೇಷ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜನರು ನಿಯಮಗಳನ್ನು ಪಾಲಿಸದ ನಿದರ್ಶನಗಳಿವೆ. ಮತದಾನ ಮಾಡುವಾಗ ಛಾಯಾಚಿತ್ರ ತೆಗೆಯುವ ಅಥವಾ ವೀಡಿಯೋ ಮಾಡಿ ಸಿಕ್ಕಿಬಿದ್ದ ನಿದರ್ಶನಗಳೂ ಇವೆ. ಹಾಗಾಗಿ ಮೊಬೈಲ್ ಫೋನ್ಗಳನ್ನು ಇಡಲು ಪ್ರಿಸೈಡಿಂಗ್ ಆಫೀಸರ್ ಬಳಿ ಟ್ರೇ ಇಡಲು ನಿರ್ಧರಿಸಲಾಗಿದೆ. ಆ ಟ್ರೇಯನ್ನು ಪೊಲೀಸರು ಅಥವಾ ಚುನಾವಣಾ ಅಧಿಕಾರಿಗಳು ಕಾವಲು ಕಾಯುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತದಾನ ಮಾಡುವಾಗ ಫೋನ್ಗಳನ್ನು ಟ್ರೇನಲ್ಲಿ ಇಡಲು ಸೂಚಿಸಬೇಕೇ ಅಥವಾ ಅವುಗಳನ್ನು ಸೈಲೆಂಟ್ ಮೋಡ್ನಲ್ಲಿ ಇಡುವಂತೆ ಹೇಳಬೇಕೇ ಎಂಬ ನಿರ್ಧಾರ ಕೈಗೊಳ್ಳುವುದನ್ನು ಪ್ರಿಸೈಡಿಂಗ್ ಆಫೀಸರ್ ವಿವೇಚನೆಗೆ ಬಿಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ಮತಗಟ್ಟೆಯೊಳಗೆ ಫೋನ್ಗಳನ್ನು ಅನುಮತಿಸದಿರಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ. ಇದು ಕೆಲವೇ ಸೆಕೆಂಡುಗಳ ವಿಷಯವಷ್ಟೆ. ಮತದಾನದ ಸಮಯದಲ್ಲಿ ಗೋಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಮಾಡಲಾಗಿತ್ತು. ಆದಾಗ್ಯೂ ಜನರು ವಿವಿಧ ಕಾರಣಗಳಿಗಾಗಿ ಫೋನ್ಗಳನ್ನು ಬಳಸಲು ಪ್ರಯತ್ನಿಸಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ಬೂತ್ಗಳಿಗೆ ಫೋನ್ ತೆಗೆದುಕೊಂಡು ಹೋಗಬೇಡಿ ಎಂದು ನಾವು ಹೇಳುತ್ತಿಲ್ಲ. ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.