ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸಲಾಗಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನು ಪ್ರತಿಯೊಬ್ಬರು ಖಂಡಿಸುತ್ತಿದ್ದಾರೆ. ಎನ್ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿರುಪತಿಯ ಲಡ್ಡುಗಳನ್ನು ತಯಾರಿಸಲು ಕಳಪೆ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು. ಸರ್ಕಾರದ ನಿರ್ಧಾರಗಳ ಬಗ್ಗೆ ಟೀಕೆ ಮಾಡಿದ ನಟ ಪ್ರಕಾಶ್ ರಾಜ್ಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಾರ್ನಿಂಗ್ ಕೊಟ್ಟಿದ್ದಾರೆ.
ಲಡ್ಡು ವಿವಾದದ ಕುರಿತು ಮಾತನಾಡಿದ್ದ ಪ್ರಕಾಶ್ ರಾಜ್ ಹೇಳಿಕೆಗೆ ಆಂಧ್ರ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ರು. ವಿಜಯವಾಡ ದುರ್ಗಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಪವನ್ ಕಲ್ಯಾಣ್ ನಾನು ಯಾವ ಧರ್ಮವನ್ನು ದೂಷಿಸಿಲ್ಲ ಎಂದಿದ್ದಾರೆ.
ಹಿಂದೂ, ಸನಾತನ ಧರ್ಮದ ಬಗ್ಗೆ ಮಾತನಾಡಿದ್ರೆ ನಟ ಪ್ರಕಾಶ್ ರಾಜ್ ಆಕ್ಷೇಪ ವ್ಯಕ್ತಪಡಿಸೋದು ಯಾಕೆ? ಇಲ್ಲಿ ನಾನು ಯಾವುದೇ ಧರ್ಮವನ್ನು ದೂಷಿಸಿಲ್ಲ, ದೇವರ ಮೂರ್ತಿಗಳ ಶಿರಚ್ಛೇದ ಮಾಡಿದ್ರೆ ನಾವು ಮಾತಾಡಬಾರದಾ? ಪ್ರಕಾಶ್ ರಾಜ್ ಎಂದರೆ ಗೌರವವಿದೆ. ಆದ್ರೆ ಈ ರೀತಿ ವರ್ತನೆ ಸರಿಯಲ್ಲ ಎಂದು ಪವನ್ ಕಿಡಿಕಾರಿದ್ರು.
ನಾವು ಮಿಷನರಿ ಶಾಲೆಯಲ್ಲಿ ಓದಿದ್ದು, ಅವರ ಬಗ್ಗೆ ಸದಾ ಗೌರವವಿರುತ್ತದೆ. ಆದ್ರೆ ನಾನು ಆಚರಿಸುವ ಧರ್ಮಕ್ಕೆ ಅನ್ಯಾಯವಾದರೆ ಮಾತನಾಡುವುದರಲ್ಲಿ ತಪ್ಪೇನು ಇಲ್ಲ. ಇದನ್ನು ಪ್ರಕಾಶ್ ರಾಜ್ ತಿಳಿದುಕೊಳ್ಳಬೇಕು ಎಂದು ಪವನ್ ಕಲ್ಯಾಣ್ ತಿರುಗೇಟು ನೀಡಿದ್ರು.
ಪ್ರಕಾಶ್ ರಾಜ್ ಮಾತ್ರವಲ್ಲ, ಜಾತ್ಯತೀತತೆಯ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಕೆಲ ವಿಚಾರ ತಿಳಿದುಕೊಳ್ಳಬೇಕಿದೆ. ಹಿಂದೂಗಳಾದ ನಾವು ತೀವ್ರ ನೋವನ್ನು ಅನುಭವಿಸುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಮಾತನಾಡುವ ಮುನ್ನ ನೂರು ಬಾರಿ ಯೋಚಿಸಬೇಕಾ ಎಂದ ಅವರು, ಅಯ್ಯಪ್ಪ ಸ್ವಾಮಿ ಮತ್ತು ಸರಸ್ವತಿ ದೇವಿ ತಮಗೆ ಇಷ್ಟ ಬಂದಂತೆ ಮಾತನಾಡುತ್ತಾರೆ. ಇದು ನಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಧರ್ಮ ಪಾಲಿಸುತ್ತಿದ್ದೇವೆ ಎಂದು ಹಿಂದೂಗಳನ್ನು ಅವಮಾನಿಸಲಾಗುತ್ತಿದೆ. ಈ ಬೆಳವಣಿಗೆಗಳು ಆತಂಕಕ್ಕೆ ಕಾರಣವಾಗಿವೆ ಎಂದು ಪವನ್ ಅಭಿಪ್ರಾಯಪಟ್ಟಿದ್ದಾರೆ. ಜಾತ್ಯತೀತತೆ ಎಂದರೆ ಎರಡೂ ಕಡೆಯವರನ್ನು ಸಮಾನವಾಗಿ ಕಾಣುವುದು ಎಂದು ಪ್ರಕಾಶ್ ರಾಜ್ ವಿರುದ್ಧ ಪವನ್ ಗುಡುಗಿದ್ರು. ಸನಾತನ ಧರ್ಮದ ಬಗ್ಗೆ ವ್ಯಂಗ್ಯವಾಡಬಾರದು, ಇಂತಹ ವಿಚಾರಗಳಲ್ಲಿ ತಾತ್ಸಾರದಿಂದ ಮಾತನಾಡಿದ್ರೆ ಸುಮ್ಮನಿರೋದಿಲ್ಲ ಎಂದು ಪವನ್ ಕಲ್ಯಾಣ್ ವಾರ್ನಿಂಗ್ ಕೊಟ್ಟಿದ್ದಾರೆ.