ಚೆನ್ನೈ: ‘ಮಾರ್ಕ್ ಆಂಟೋನಿ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ತಮಿಳು ನಟ-ನಿರ್ಮಾಪಕ ವಿಶಾಲ್ ಕೃಷ್ಣಾ ರೆಡ್ಡಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿರುವ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸಿನಿಮಾದ ಚಿತ್ರೀಕರಣದ ವೇಳೆ ವಿಶಾಲ್ ನೆಲದ ಮೇಲೆ ಬೀಳುತ್ತಾರೆ. ಅದೇ ಹೊತ್ತಿಗೆ, ನಿಯಂತ್ರಣ ಕಳೆದುಕೊಂಡ ಭಾರೀ ವಾಹನವೊಂದು ಸಿನಿಮಾ ಸೆಟ್ ಅನ್ನು ಗುದ್ದಿಕೊಂಡು ಬಂದು ವಿಶಾಲ್ ಪಕ್ಕದಲ್ಲೇ ಬಂದು ನಿಲ್ಲುತ್ತದೆ. ಸಹಕಲಾವಿದರೂ ವಿಶಾಲ್ ಅವರನ್ನು ಮತ್ತಷ್ಟು ದೂರಕ್ಕೆ ಒಯ್ಯುವುದು ವಿಡಿಯೊದಲ್ಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಶಾಲ್, ‘ಕೆಲವೇ ಸೆಕೆಂಡ್, ಕೆಲವೇ ಇಂಚುಗಳಲ್ಲಿ ನನ್ನ ಜೀವ ಉಳಿಯಿತು. ದೇವರಿಗೆ ಧನ್ಯವಾದಗಳು. ಈ ಘಟನೆಯಿಂದ ನಾನು ದಿಗ್ಭ್ರಾಂತನಾಗಿದ್ದೇನಾದರೂ, ಶೂಟಿಂಗ್‌ಗೆ ಹಿಂದಿರುಗಿದ್ದೇನೆ’ ಎಂದಿದ್ದಾರೆ.