ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತಮ್ಮ 48ನೇ ವರ್ಷದ ಹುಟ್ಟುಹಬ್ಬವನ್ನು ಚೆನ್ನೈನ ಕಿಲ್ಪಾಕ್ ವೃದ್ಧಾಶ್ರಮದಲ್ಲಿ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಹುಟ್ಟುಹಬ್ಬದಂದು ಈವೃದ್ಧಾಶ್ರಮಕ್ಕೆ ಭೇಟಿ ನೀಡುವ ನಟ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಈ ವೇಳೆ ಮಾತನಾಡಿದ ವಿಶಾಲ್. ನಾನು ಯಾವಾಗಲೂ ಇಲ್ಲಿಗೆ ಭೇಟಿ ನೀಡುವ ಮೂಲಕ ನನ್ನ ಹುಟ್ಟುಹಬ್ಬ ಆಚರಣೆ ಪ್ರಾರಂಭಿಸುತ್ತೇನೆ. ಅವರನ್ನು ಭೇಟಿಯಾಗುವುದು ನನ್ನ ದೊಡ್ಡ ಸೌಭಾಗ್ಯ. ಅವರ ಆಶೀರ್ವಾದವೇ ದೊಡ್ಡ ಭಾಗ್ಯ. ನಾನು ಊಟ ಬಡಿಸಲಿಲ್ಲ. ಅದಾಗ್ಯೂ ಅವರು ನನ್ನನ್ನು ಸ್ವಾಗತಿಸಿದರು, ಆತ್ಮೀಯವಾಗಿ ಮಾತನಾಡಿಸಿದರೆಂದು ತಿಳಿಸಿದರು.
ತಮಿಳುನಾಡಿನಲ್ಲಿ ನಟಿಯರಿಗೆ ಸುರಕ್ಷಿತ ವಾತಾವರಣವಿದೆ. ನಟಿಯರಿಗೆ ವೈಯಕ್ತಿಕ ಅಂಗರಕ್ಷಕರಿರುತ್ತಾರೆ. ಆದ್ರೆ ಶೇ.20ರಷ್ಟು ಜನರಿಗೆ ಮಾತ್ರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಇನ್ನು, ಕೆಲವರು ಅವಕಾಶಗಳಿಂದ ವಂಚಿತರಾಗಿ ನಿರಾಶರಾಗಿದ್ದಾರೆ. ಸಿನಿಮಾ ಪ್ರವೇಶಿಸುವಾಗ, ನಾವು ಯಾವ ಸಂಸ್ಥೆಗೆ ಹೋಗುತ್ತಿದ್ದೇವೆ? ಅವು ಅಧಿಕೃತವೇ? ಅವರು ನಿಜವಾಗಿಯೂ ಸಿನಿಮಾ ಮಾಡುತ್ತಿದ್ದಾರೆಯೇ? ಎಂಬುದರ ಬಗ್ಗೆ ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಎಂದರು.
ಯಾರಾದರೂ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆ, ಯುವತಿ ಧೈರ್ಯದಿಂದ ರಿಯಾಕ್ಟ್ ಮಾಡಬೇಕು. ಹೊಂದಾಣಿಕೆಗೆ ಅಥವಾ ಅವರ ಬೇಡಿಕೆಗಳಿಗೆ ಸಮ್ಮತಿಸಲು ಒತ್ತಾಯಿಸಿದರೆ ಚಪ್ಪಲಿಯಿಂದ ಹೊಡೆಯುವ ಧೈರ್ಯ ಹೊಂದಿರಬೇಕು. ಮಹಿಳೆಯನ್ನು ಬಳಸಿಕೊಳ್ಳಲು ಬಯಸುವವರಿಗೆ ಶಿಕ್ಷೆಯಾಗಬೇಕು. ತಮಿಳು ಚಿತ್ರರಂಗದಲ್ಲಿ ‘ಹೊಂದಾಣಿಕೆ’ಯಂತಹ ಸಮಸ್ಯೆಗಳು ಇಲ್ಲ ಎಂದು ಹೇಳಲಾಗದು. ಇಂತಹ ದೂರುಗಳು ಬಹಳ ಹಿಂದಿನಿಂದಲೂ ಇವೆ. ಇಲ್ಲಿಯೂ ಇದೇ ರೀತಿಯ ಸಮಸ್ಯೆಗಳಿರಬಹುದು. ಕೆಲ ಕಂಪನಿಗಳು ಕಚೇರಿಯನ್ನು ಸ್ಥಾಪಿಸಿ ಫೋಟೋಶೂಟ್ಗೆ ಮಹಿಳೆಯರನ್ನು ಬಳಸಿಕೊಳ್ಳುತ್ತವೆ. ನಾನು ಆ ವಿಚಾರವನ್ನು ಅಲ್ಲಗಳೆಯುವುದಿಲ್ಲ ಎಂದು ತಿಳಿಸಿದರು.
ನಾವು ಪೊಲೀಸರಲ್ಲ. ಆದರೆ ಯಾವುದೇ ನಟಿ ಅನುಚಿತ ವರ್ತನೆ ಬಗ್ಗೆ ದೂರು ನೀಡಿದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ನ್ಯಾಯಮೂರ್ತಿ ಹೇಮಾ ಸಮಿತಿಯಂತೆ ತಮಿಳು ಚಲನಚಿತ್ರ ಸಂಘದ ವತಿಯಿಂದಲೂ ಸಮಿತಿ ರಚಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.