ಭಾರತದ ಮೂರನೇ ಅತಿ ದೊಡ್ಡ ಚಿತ್ರರಂಗವಾಗಿರುವ ತಮಿಳು ಚಿತ್ರರಂಗದಲ್ಲಿ ಲಕ್ಷಾಂತರ ಉದ್ಯೋಗಿಗಳಿದ್ದಾರೆ. ಆದರೆ ಇಲ್ಲಿ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 1 ರಿಂದ ತಮಿಳು ಸಿನಿಮಾಗಳ ಚಿತ್ರೀಕರಣ ಬಂದ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ನವೆಂಬರ್ 1 ರಿಂದ ಬಂದ್ ಮಾಡುವ ನಿರ್ಣವನ್ನು ತಮಿಳು ಚಿತ್ರರಂಗದ ನಿರ್ಮಾಪಕರು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಭೆ ನಡೆಸಿದ ತಮಿಳು ಚಿತ್ರರಂಗದ ನಿರ್ಮಾಪಕರು ಹಲವು ವಿಷಯಗಳನ್ನು ಚರ್ಚಿಸಿದ್ದು, ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆ, ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ನವೆಂಬರ್ 1 ರಿಂದ ಚಿತ್ರೀಕರಣ ನಿಲ್ಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಸಿನಿಮಾ ನಟರ ಸಂಭಾವನೆ ಹೆಚ್ಚಳ, ನಟ-ನಟಿಯರ ಅನಧಿಕೃತ ಬೇಡಿಕೆಗಳು, ಫೈನ್ಯಾನ್ಸ್ ಸಮಸ್ಯೆಗಳು, ಸರ್ಕಾರದ ಸಹಾಯ, ಚಿತ್ರರಂಗದಲ್ಲಿ ದುಡಿಯುತ್ತಿರುವವವ ಸಂಭಾವನೆ ಏರಿಕೆ, ಬೆಲೆ ಏರಿಕೆ ಇನ್ನಿತರೆ ಸಮಸ್ಯೆಗಳ ಬಗ್ಗೆ ನಿರ್ಮಾಪಕರು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೇ ಇದ್ದರೆ ನವೆಂಬರ್ 1 ರಿಂದ ಚಿತ್ರೀಕರಣವನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ತಮಿಳುನಾಡು ಸಿನಿಮಾ ನಿರ್ಮಾಪಕರ ಸಂಘ, ತಮಿಳುನಾಡು ಸಿನಿಮಾ ಪ್ರದರ್ಶಕರ ಸಂಘ, ತಮಿಳುನಾಡು ಸಿನಿಮಾ ವಿತರಕರ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಪ್ರತಿಯೊಂದು ಸಂಘಟನೆಯೂ ಸಹ ತಾವು ಚಿತ್ರರಂಗದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು.
ಯಾವುದೇ ದೊಡ್ಡ ನಟನ ಸಿನಿಮಾಗಳು ಚಿತ್ರರಂಗದಲ್ಲಿ ಬಿಡುಗಡೆ ಆದ ಎರಡು ತಿಂಗಳ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕು. ಯಾವುದೇ ಸ್ಟಾರ್ ನಟ ಒಂದು ಸಿನಿಮಾಕ್ಕೆ ಅಡ್ವಾನ್ಸ್ ಪಡೆದನೆಂದರೆ ಆ ಸಿನಿಮಾ ಮುಗಿಯುವ ವರೆಗೂ ಹೊಸ ಸಿನಿಮಾದ ಅಡ್ವಾನ್ಸ್ ಪಡೆಯುವಂತಿಲ್ಲ. ಸಿನಿಮಾ ನಟರ ಸಿಬ್ಬಂದಿಯ ಖರ್ಚನ್ನು ನಟರೇ ಭರಿಸಬೇಕು. ಹೊಸ ತಮಿಳು ಸಿನಿಮಾಗಳ ಬಿಡುಗಡೆ ಬಗ್ಗೆ ಹೊಸ ನಿಯಮಗಳನ್ನು ಜಾರಿ ಮಾಡಬೇಕು. ಆಗಸ್ಟ್ 16 ರಿಂದ ವಾರಕ್ಕೆ ಇಂತಿಷ್ಟೆ ಸಿನಿಮಾಗಳು ಬಿಡುಗಡೆ ಆಗಬೇಕೆಂಬ ನಿಯಮ ಜಾರಿ ಆಗಬೇಕು.
ಇದರ ಜೊತೆಗೆ ಸಿನಿಮಾದ ಮುಖ್ಯ ನಟರ ಸಂಭಾವನೆ ಭಾರಿ ಏರಿಕೆ ಆಗಿದ್ದು, ನಟರ ಸಂಭಾವನೆ ಇಳಿಕೆ ಆಗಬೇಕು. ಈಗ ಚಾಲ್ತಿಯಲ್ಲಿರುವ ದೊಡ್ಡ ಸಿನಿಮಾಗಳ ಚಿತ್ರೀಕರಣ ಅಕ್ಟೋಬರ್ 30ಕ್ಕೆ ಬಹುತೇಕ ಅಂತ್ಯವಾಗಲಿದೆ. ಅದಾದ ಬಳಿಕ ನವೆಂಬರ್ 1 ರಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಚಿತ್ರರಂಗ ಬಂದ್ ಮಾಡಲಾಗುತ್ತಿದೆ.