ರೋಮ್: 24 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಬರೋಬ್ಬರಿ 20 ವರ್ಷ ಅನಾರೋಗ್ಯದ ಕಾರಣ ಹೇಳಿ ಶಾಲೆಗೆ ರಜೆ ಹಾಕಿದ್ದ ಶಿಕ್ಷಕಿಯನ್ನು ಕೊನೆಗೂ ಶಾಲಾ ಆಡಳಿತ ಮಂಡಳಿ ವಜಾಗೊಳಿಸಿದೆ. ಅಲ್ಲದೆ ಈಕೆಗೆ ‘ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ’ ಎಂಬ ಪಟ್ಟವನ್ನು ನೀಡಿದೆ.
ವೆನಿಸ್ ನಗರದ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ವಶಾಸ್ತ್ರದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಂಜಿಯಾ ಪಾವೊಲಿನಾ ಡಿ ಲಿಯೊ ಎಂಬ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಲಿಯೋ ತನ್ನ 24 ವರ್ಷಗಳ ಸೇವೆಯಲ್ಲಿ 20 ವರ್ಷ ಪಾಠ ಮಾಡಲು ತರಗತಿಗೆ ಹೋಗಿಲ್ಲ. ಮೊದಲ 10 ವರ್ಷ ಆಕೆ ಸಂಪೂರ್ಣವಾಗಿ ಗೈರುಹಾಜರಾಗಿದ್ದಳು. ಉಳಿದ 14 ವರ್ಷ ಆಕೆ ಅನಾರೋಗ್ಯ, ವೈಯಕ್ತಿಕ ಅಥವಾ ಕೌಟುಂಬಿಕ ಕಾರಣ ನೀಡಿ ರಜೆ ತೆಗೆದುಕೊಂಡಿದ್ದಳು. ವಿಶೇಷ ಅಂದರೆ ಕರ್ತವ್ಯಕ್ಕೆ ಗೈರುಹಾಜರಾಗಿರುವಾಗಲೂ ಆಕೆ ವೇತನವನ್ನು ಪಡೆದಿದ್ದಳು ಎಂದು ಇಟಲಿಯ ಶಿಕ್ಷಣ ಸಚಿವಾಲಯ ಹೇಳಿದೆ.
ಮಕ್ಕಳ ಪರೀಕ್ಷೆ ಸಂದರ್ಭದಲ್ಲಿಯೂ ಶಾಲೆಗೆ ರಜೆ ಹಾಕುತ್ತಿದ್ದ ಲಿಯೋ, ವಿದ್ಯಾರ್ಥಿಗಳು ಗೋಗರೆದರೂ ಪಾಠ ಮಾಡುತ್ತಿರಲಿಲ್ಲ. ಅಲ್ಲದೆ ಈ ಬಗ್ಗೆ ಆಕೆಗೆ ಮೇಸೆಜ್ ಕಳುಹಿಸಿದರೆ ಪಠ್ಯವನ್ನು ತಾವೇ ಓದುವಂತೆ ವಿದ್ಯಾರ್ಥಿಗಳನ್ನು ಗದರುತ್ತಿದ್ದಳು. ಇನ್ನು ಪರೀಕ್ಷಾ ಮೌಲ್ಯಮಾಪನದ ವೇಳೆ ವಿದ್ಯಾರ್ಥಿಗಳಿಗೆ ಮನಬಂದಂತೆ ಅಂಕ ನೀಡಿದ್ದಳು ಎನ್ನಲಾಗಿದೆ.
ಶಿಕ್ಷಕಿಯ ವರ್ತನೆಯಿಂದ ಬೇಸತ್ತ ಶಾಲೆಯ ವಿದ್ಯಾರ್ಥಿಗಳು ಜೂನ್ 22ರಂದು ಮುಷ್ಕರ ನಡೆಸಿದ್ದರು. ಆ ಬಳಿಕ ಶಿಕ್ಷಕಿಯನ್ನು ವಜಾಗೊಳಿಸಲಾಗಿತ್ತು. ಆದರೆ ಲಿಯೋ, ಈ ಪ್ರಕರಣವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ತನ್ನ ಕೆಲಸವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಕೊನೆಗೆ ತೀರ್ಪನ್ನು ಮರುಪರಿಶೀಲಿಸಿದ ನ್ಯಾಯಾಲಯವು, ಶಿಕ್ಷಕಿಯ ಹಾಜರಿ ಪುಸ್ತಕ ಕಂಡು ತನ್ನ ತೀರ್ಪನ್ನು ಬದಲಿಸಿ, ಆಕೆಯನ್ನು ಕೆಲಸದಿಂದ ತೆಗೆದು ಹಾಕುವಂತೆ ತಾಕೀತು ಮಾಡಿದೆ.