ಲಖನೌ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಲ್ಲಿ ಅಪಾರವಾದ ಬ್ಯಾಟಿಂಗ್ ಕೌಶಲ್ಯ ಹೊಂದಿದ್ದು, ಸುಲಭವಾಗಿ ಶತಕ ಗಳಿಸುವ ಸಾಮರ್ಥ್ಯವನ್ನು ಪಡೆದಿದ್ದಾರೆ. 2023ರ ವಿಶ್ವಕಪ್ ಟೂರ್ನಿಯಲ್ಲಿ ಹಿಟ್ ಮ್ಯಾನ್ ಶತಕ ಗಳಿಸುವತ್ತ ಗಮನ ಹರಿಸದೆ ತಂಡದ ಗೆಲುವಿಗೆ ಹೆಗಲಾಗಿದ್ದಾರೆ ಎಂದು ಮಾಜಿ ಆರಂಭಿಕ ಗೌತಮ್ ಗಂಭೀರ್ ಪರೋಕ್ಷವಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ.
ಭಾನುವಾರ (ಅಕ್ಟೋಬರ್ 29) ಲಖನೌದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾದ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ 2011ರ ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್, 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ, ಅವರು ತಮ್ಮ ವೈಯಕ್ತಿಕ ದಾಖಲೆಗೆ ಚಿಂತಿಸದೆ ತಂಡದ ಗೆಲುವಿನತ್ತ ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ನಿಸ್ವಾರ್ಥ ಆಟಗಾರ
“ರೋಹಿತ್ ಶರ್ಮಾ ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ 40-45 ಶತಕ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರು ಶತಕಗಳ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ. ಅವರೊಬ್ಬರು ನಿಸ್ವಾರ್ಥ ಆಟಗಾರರಾಗಿದ್ದಾರೆ,” ಎಂದು ಗಂಭೀರ್ ಶ್ಲಾಘಿಸಿದ್ದಾರೆ.