ಭಾರತದದಲ್ಲಿ ಅಕ್ಟೋಬರ್ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಲು ಪಾಕ್ ಪ್ರಧಾನಿ ಶಾಬಾಜ್ ಶರೀಪ್ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೇತೃತ್ವದ ಸಮಿತಿಯು ಭಾರತದಲ್ಲಿ ಪಾಕ್ ಆಟಗಾರರಿಗೆ ನೀಡಲಾಗುವ ಭದ್ರತೆ, ಸರ್ಕಾರದ ನಿಲುವು ಹಾಗೂ ಇತರ ಆಯಾಮಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಆ ಬಳಿಕ ಪಾಕ್ ತಂಡ ವಿಶ್ವಕಪ್ನಲ್ಲಿ ಪಾಲ್ಗೊಳ್ಳಬೇಕೇ ಬೇಡಬೇ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ. ಆದರೆ ಅದಕ್ಕೂ ಮುನ್ನ ಪಾಕ್ ತಂಡದ ಮಾಜಿ ಆಲ್ರೌಂಡರ್ ನೀಡಿರುವ ಹೇಳಿಕೆ ಟೀಂ ಇಂಡಿಯಾ (Team India) ಅಭಿಮಾನಿಗಳನ್ನು ಕೆರಳಿಸಿದೆ. ವಾಸ್ತವವಾಗಿ ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟಿರುವುದರಿಂದ ಎರಡೂ ದೇಶಗಳ ತಂಡಗಳು ದ್ವಿಪಕ್ಷೀಣ ಸರಣಿಯನ್ನು ಆಡುತ್ತಿಲ್ಲ. ಆದರೆ ಇದಕ್ಕೆ ಹೊಸ ಬಣ್ಣ ಹಚ್ಚಿರುವ ಪಾಕ್ ಮಾಜಿ ಕ್ರಿಕೆಟಿಗ ಸೋಲುವ ಭೀತಿಯಿಂದ ಭಾರತ ತಂಡ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಣ ಸರಣಿ ಆಡುತ್ತಿಲ್ಲ ಎಂದಿದ್ದಾರೆ.
ಅತಿರೇಕವೆನಿಸಿದ ಅಬ್ದುಲ್ ರಜಾಕ್ ಹೇಳಿಕೆ
ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸರಣಿಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್, ‘ಭಾರತ-ಪಾಕಿಸ್ತಾನ ತಂಡವು ಪರಸ್ಪರ ಗೌರವ ಮತ್ತು ಸೌಹಾರ್ದತೆಯ ಭಾವನೆಯನ್ನು ಹೊಂದಿದೆ. 1997-98 ರಿಂದ ಭಾರತ ತಂಡ ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಣ ಸರಣಿ ಆಡಿಲ್ಲ. ಏಕೆಂದರೆ ಪಾಕ್ ತಂಡ ಭಾರತದ ವಿರುದ್ಧ ಯಾವಾಗಲೂ ಮೇಲುಗೈ ಸಾಧಿಸಿದೆ. ಇತ್ತ ಟೀಂ ಇಂಡಿಯಾ ನಮ್ಮೇದುರು ಯಾವಾಗಲೂ ಸೋತಿದೆ. ಹೀಗಾಗಿ ಭಾರತ ನಮ್ಮೊಂದಿಗೆ ಆಡಲು ಹಿಂದೇಟು ಹಾಕುತ್ತಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಾವು 2023 ರಲ್ಲಿ ಇದ್ದೇವೆ. ನಮ್ಮ ಆಲೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಯಾವುದೇ ತಂಡವು ತುಂಬಾ ದುರ್ಬಲವಲ್ಲ ಅಥವಾ ತುಂಬಾ ಬಲಿಷ್ಠವಲ್ಲ. ಆ ದಿನ ನೀವು ಹೇಗೆ ಪ್ರದರ್ಶನ ನೀಡುತ್ತೀರಿ? ಅದು ಮುಖ್ಯವಾಗಿದೆ’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ರಜಾಕ್, ಭಾರತ ಯಾವಾಗಲೂ ನಮ್ಮೇದುರು ಸೋಲುತ್ತದೆ. ಆದ್ದರಿಂದ ಅವರು 1998 ರಿಂದ ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಣ ಸರಣಿಯನ್ನು ಆಡಿಲ್ಲ. ಆದರೆ ಈಗ ಎರಡೂ ತಂಡಗಳು ಉತ್ತಮವಾಗಿವೆ. ಪಾಕಿಸ್ತಾನ ತಂಡ ದುರ್ಬಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ನೀವು ಆಶಸ್ ಸರಣಿಯನ್ನು ವೀಕ್ಷಿಸಿ. ಯಾವ ತಂಡ ಉತ್ತಮವಾಗಿದೆ ಎಂದು ನೀವು ಹೇಳಬಲ್ಲಿರಾ? ಪ್ರದರ್ಶನ ನೀಡುವ ತಂಡ ಗೆಲ್ಲುತ್ತದೆ. ನಾವು ಪರಸ್ಪರ ದ್ವಿಪಕ್ಷೀಯ ಸರಣಿಯ ಪಂದ್ಯಗಳನ್ನು ಆಡಬೇಕಾಗಿದೆ ಎಂದು ರಜಾಕ್ ಹೇಳಿದ್ದಾರೆ.