ಅಹಮಾದಾಬಾದ್: ಬೌಲರ್ಗಳ ಬೆಂಕಿ ಬೌಲಿಂಗ್ ನಂತರ ರೋಹಿತ್ ಶರ್ಮಾ (Rohit Sharma) ಸ್ಫೋಟಕ ಅರ್ಧಶತಕದ ನೆರವಿನಿಂದ ಪಾಕಿಸ್ತಾನ (Pakistan) ವಿರುದ್ಧ ಭಾರತ (Team India) 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಕ್ ವಿರುದ್ಧ ವಿಶ್ವಕಪ್ನಲ್ಲಿ (World Cup Cricket) 8-0 ಅಜೇಯ ಓಟ ಮುಂದುವರಿದಿದೆ.
ಗೆಲ್ಲಲು 192 ರನ್ಗಳ ಗುರಿಯನ್ನು ಪಡೆದ ಭಾರತ ಇನ್ನೂ 117 ಎಸೆತ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 192 ರನ್ ಹೊಡೆಯುವ ಮೂಲಕ ಗೆಲುವಿನ ನಗೆ ಬೀರಿತು. ಹ್ಯಾಟ್ರಿಕ್ ಜಯದೊಂದಿಗೆ ಭಾರತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಭಾರತದ ಇನ್ನಿಂಗ್ಸ್ನ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟುವ ಮೂಲಕ ಬಿಸಿ ಮುಟ್ಟಿಸಿದ ರೋಹಿತ್ ಶರ್ಮಾ ಸಿಕ್ಸರ್, ಬೌಂಡರಿ ಚಚ್ಚುವ ಮೂಲಕ ಪಾಕ್ ಬೌಲರ್ಗಳ ಬೆವರಿಳಿಸಿಲು ಆರಂಭಿಸಿದರು. ಡೆಂಗ್ಯೂಗೆ ತುತ್ತಾಗಿದ್ದ ಶುಭಮನ್ ಗಿಲ್ 16 ರನ್ (11 ಎಸೆತ, 4 ಬೌಂಡರಿ) ಹೊಡೆದು ಔಟಾದ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎರಡನೇ ವಿಕೆಟಿಗೆ 42 ಎಸೆತದಲ್ಲಿ 56 ರನ್ ಜೊತೆಯಾಟವಾಡಿದರು.
ಕೊಹ್ಲಿ 16 ರನ್(18 ಎಸೆತ, ಬೌಂಡರಿ) ಹೊಡೆದು ಕ್ಯಾಚ್ ನೀಡಿ ಔಟಾದರು. ಮೂರನೇ ವಿಕೆಟಿಗೆ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ 71 ಎಸೆತಗಳಲ್ಲಿ 77 ರನ್ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹತ್ತಿರ ತಂದರು. ಸಿಕ್ಸರ್, ಬೌಂಡರಿಗಳೊಂದಿಗೆ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 86 ರನ್ (63 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಸಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಮುರಿಯದ ನಾಲ್ಕನೇ ವಿಕೆಟಿಗೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ 53 ಎಸೆತಗಳಲ್ಲಿ 36 ರನ್ ಜೊತೆಯಾಟವಾಡುವ ಮೂಲಕ ಜಯಗಳಿಸಿತು.ಶ್ರೇಯಸ್ ಅಯ್ಯರ್ ಔಟಾಗದೇ 53 ರನ್ (62 ಎಸೆತ, 3 ಬೌಂಡರಿ) ಕೆಎಲ್ ರಾಹುಲ್ ಔಟಾಗದೇ 19 ರನ್ ( 29 ಎಸೆತ, 2 ಬೌಂಡರಿ) ಹೊಡೆದರು.