ಮುಂಬೈ: ಇದೇ ಜೂನ್ 7ರಿಂದ 11ರ ವರೆಗೆ ಭಾರತ ಮತ್ತು ಆಸ್ಟ್ರೇಲಿಯಾ (Australia) ನಡುವೆ ಲಂಡನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ನಡೆಯಲಿದ್ದು, 10 ವರ್ಷಗಳ ಬಳಿಕ ಭಾರತ (Team India) ಮತ್ತೆ ಚಾಂಪಿಯನ್ ಪಟ್ಟಕ್ಕೇರಲು ಸಮರಾಭ್ಯಾಸ ನಡೆಸುತ್ತಿದೆ.
2021ರಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳಿಂದ ಸೋತು ನಿರಾಸೆ ಕಂಡಿತ್ತು. ಇದೀಗ ಮತ್ತೆ ಫೈನಲ್ ಪ್ರವೇಶಿಸಿದ್ದು, ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದೆ. 2013ರಲ್ಲಿ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿ ಭಾರತ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ಧೋನಿ ನಂತರ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಆದ್ರೆ ಟ್ರೋಫಿ ಗೆಲ್ಲಿಸುವಲ್ಲಿ ಯಶಸ್ವಿಯಾಗಲಿಲ್ಲ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 2014ರಲ್ಲಿ T20 ವಿಶ್ವಕಪ್ ಫೈನಲ್ ತಲುಪಿ ಶ್ರೀಲಂಕಾ (Sri Lanka) ವಿರುದ್ಧ 6 ವಿಕೆಟ್ಗಳಿಂದ ಸೋತಿತ್ತು. 2017ರಲ್ಲಿ ಚಾಂಪಿಯನ್ಶಿಪ್ ಟ್ರೋಫಿ ಫೈನಲ್ ತಲುಪಿ, ಪಾಕಿಸ್ತಾನದ (Pakistan) ಎದುರು 180 ರನ್ಗಳಿಂದ ಸೋತಿತ್ತು. 2021ರಲ್ಲಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿದರೂ ನ್ಯೂಜಿಲೆಂಡ್ ತಂಡವನ್ನ ಮಣಿಸುವಲ್ಲಿ ವಿಫಲವಾಯಿತು. ಇದೀಗ ಸತತ ಗೆಲುವಿನ ಹಾದಿಯಲ್ಲಿರುವ ಟೀಂ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಹಾಗೂ ಅನುಭವಿ ಬೌಲರ್ಗಳ ಪಡೆ ಹೊಂದಿದ್ದು, 10 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಉತ್ಸುಕವಾಗಿದೆ.
ಈ ಕುರಿತು ಮಾತನಾಡಿರುವ ಟೀಂ ಇಂಡಿಯಾ ಮಾಜಿ ಮುಖ್ಯಕೋಚ್ ರವಿಶಾಸ್ತ್ರಿ, ಪ್ರಸ್ತುತ ಇರುವ ಟೀಂ ಇಂಡಿಯಾ ಐಸಿಸಿ ಪ್ರಶಸ್ತಿ ಬರ ನೀಗಿಸುವ ಸಾಮರ್ಥ್ಯ ಹೊಂದಿದೆ. ಕಳೆದ 3-4 ವರ್ಷಗಳಿಂದಲೂ ತಂಡ ಬಲಿಷ್ಠವಾಗಿದೆ. ಈ ಬಾರಿ ಟ್ರೋಫಿ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.