ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ತಂಡ ಎರಡು ವಾರಗಳಿಂದ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಿಂದ ಭೂಮಿಗೆ ಮರಳಬೇಕಿದ್ದ ಬೋಯಿಂಗ್ ಸ್ಟಾರ್ಲೈನರ್ ತಡವಾಗಿದೆ.
ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ತಂಡ ಆರಂಭದಲ್ಲಿ ಜೂನ್ 14 ಕ್ಕೆ ವಾಪಸಾಗುತ್ತಾರೆ ಎಂದು ಹೇಳಲಾಗಿತ್ತು. ನಂತರ ಜೂನ್ 26ಕ್ಕೆ ಮುಂದೂಡಲಾಯಿತು. ಆದಾಗ್ಯೂ, ನಿಲ್ದಾಣವು ಎರಡು ಯೋಜಿತ ನಡಿಗೆಗಳನ್ನು ಜೂನ್ 24 ರಂದು ಮತ್ತು ಇನ್ನೊಂದು ಜುಲೈ 2 ರಂದು ನಡೆಯಬೇಕಾಗಿರುವುದರಿಂದ ಯೋಜನೆಯನ್ನು ಬದಲಾಯಿಸಲಾಗಿದೆ. ನಾವು ನಮ್ಮ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ನಮ್ಮ ಸ್ಟ್ಯಾಂಡರ್ಡ್ ಮಿಷನ್ ಮ್ಯಾನೇಜ್ಮೆಂಟ್ ತಂಡದ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದ್ದಾರೆ.
ಇನ್ನು ಬೋಯಿಂಗ್ ಸ್ಟಾರ್ಲೈನರ್ನಲ್ಲಿ ಕೇವಲ 27ದಿನಗಳ ಇಂಧನ ಹೊಂದಿದ್ದು, ಅಷ್ಟರೊಳಗೆ ತಾಂತ್ರಿಕ ಸಮಸ್ಯೆ ನಿವಾರಿಸಬೇಕಾಗಿದೆ. ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಸಂಚರಿಸಿದ್ದ ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಜೂನ್ 6 ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಸುರಕ್ಷಿತವಾಗಿ ಇಳಿದಿತ್ತು. ಈ ವೇಳೆ ಸುನೀತಾ ವಿಲಿಯಮ್ಸ್ ಅವರು ಇತರ ಏಳು ಗಗನಯಾತ್ರಿಗಳನ್ನು ಆತ್ಮೀಯವಾಗಿ ತಬ್ಬಿಕೊಂಡಿದ್ದಾರೆ. ಜತೆಗೆ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಐಎಸ್ಎಸ್ನ ಸಂಪ್ರದಾಯದಂತೆ ಗಂಟೆ ಬಾರಿಸುವ ಮೂಲಕ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಸ್ವಾಗತಿಸಲಾಯಿತು. ಡ್ಯಾನ್ಸ್ ಮಾಡುತ್ತಲೇ ಅವರು ಕಾಲಿಟ್ಟರು. ಸುನೀತಾ ವಿಲಿಯಮ್ಸ್ ʼಡ್ಯಾನ್ಸ್ ಪಾರ್ಟಿʼ ಬಗ್ಗೆ ಮಾತನಾಡುತ್ತಾ, ತಮ್ಮ ಸಿಬ್ಬಂದಿಯನ್ನು ʼಮತ್ತೊಂದು ಕುಟುಂಬʼ ಎಂದು ಕರೆದಿದ್ದಾರೆ. ಅಂತಹ ದೊಡ್ಡ ಸ್ವಾಗತಕ್ಕಾಗಿ ಧನ್ಯವಾದ ಅರ್ಪಿಸಿದರು.
ಫ್ಲೊರಿಡಾದಲ್ಲಿರುವ ಕೇಪ್ ಕ್ಯಾನವರಲ್ ಸ್ಪೇಸ್ ಫೋರ್ಸ್ ಸೆಂಟರ್ನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಉಡಾವಣೆಯಾದ ಸುಮಾರು 26 ಗಂಟೆಗಳ ನಂತರ ಬಾಹ್ಯಾಕಾಶ ನೌಕೆ ಐಎಸ್ಎಸ್ನಲ್ಲಿ ಇಳಿಯಿತು. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿ ಒಂದು ವಾರ ಕಳೆಯಲಿದ್ದಾರೆ ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ನಾಸಾ ಬಾಹ್ಯಾಕಾಶ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಆರನೇ ಬಾಹ್ಯಾಕಾಶ ನೌಕೆ ಎಂಬ ಖ್ಯಾತಿಗೆ ಸ್ಟಾರ್ಲೈನರ್ ಭಾಜನವಾಯಿತು.