ಕೋಲಾರ: ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಿರುವ ತಹಶೀಲ್ದಾರ್ ಶೋಭಿತಾ, ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಆರೋಪ ಸಾಬೀತಾಗಿದ್ದು ಕೂಡಲೇ ಕ್ರಮ ವಹಿಸಬೇಕು ಎಂದು ದಮನಿತರ ಸಂಘರ್ಷ ಸಮಿತಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದರು. ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಮಾತನಾಡಿ, ಕೋಲಾರ ತಾಲ್ಲೂಕು ಸುಗಟೂರು ಹೋಬಳಿ ಉರಿಗಲಿ ಗ್ರಾಮದ ಸರ್ವೆ ನಂ 106 ರಲ್ಲಿ ಫಾರಂ ನಂ 53 ಸಲ್ಲಿಸದೇ ಇದ್ದರೂ ಲಕ್ಷಾಂತರ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕೋಲಾರ ನಗರದ ನಾರಾಯಣಸ್ವಾಮಿ ಎಂಬುವವರಿಗೆ ಜಮೀನು ಮಂಜೂರು ಮಾಡಿದ್ದಾರೆ. ಈ ಬಗ್ಗೆ ನಾವು ಕೋರ್ಟ್ ಮೊರೆ ಹೋಗಿದ್ದು ಅಕ್ರಮವಾಗಿ ಜಮೀನು ಮಂಜೂರು ಮಾಡಿರುವ ಆರೋಪ ಸಾಬೀತಾಗಿದೆ. ಅಂದಿನ ಕೋಲಾರ ತಹಶೀಲ್ದಾರ್ ಆಗಿದ್ದ ಶೋಬಿತಾ, ರಾಜಸ್ವ ನಿರೀಕ್ಷಕ ರಮೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಆನಂದ್ ಬಾಬು ದಾಖಲೆ ಪರಿಶೀಲನೆ ನಡೆಸಿ ಇವರ ವಿರುದ್ಧ ಉಪ ವಿಭಾಗಾಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಶಿಪಾರಸ್ಸು ಮಾಡಿದ್ದಾರೆ.
ಉಪವಿಭಾಗಾಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿ ಅಕ್ರಮವಾಗಿ ಮಂಜೂರು ಮಾಡಿದ್ದ ಸಾಗುವಳಿ ಚೀಟಿಯನ್ನು ವಜಾಮಾಡಿ ಆದೇಶಿಸಿ ಅಧಿಕಾರಿಗಳ ವಿರುದ್ದ ಕರಡು ದೋಷಾರೋಪ ಪಟ್ಟಿ ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲೂ ಆದೇಶಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಭ್ರಷ್ಟ ಅಧಿಕಾರಿಗಳ ಪರವಾಗಿ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು. ಇನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜ್ಯಪಾಲರ ಆಜ್ಞಾನುಸಾರ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಕಾಲಂ 17(ಎ) ಅನ್ವಯ ತನಿಖೆ ಕೈಗೊಳ್ಳಲು ಕರ್ನಾಟಕ ಲೋಕಾಯುಕ್ತ ನಿರ್ದೇಶಕರಿಗೆ ಆದೇಶ ಮಾಡಿದ್ದಾರೆ. ಪ್ರಾದೇಶಿಕ ಆಯುಕ್ತರು ಸಹ 10-01-2023 ರಂದು ಜಿಲ್ಲಾಧಿಕಾರಿಗಳಿಗೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ನಿರ್ದೇಶನ ನೀಡಬೇಕೆಂದು ಸೂಚಿಸಿದ್ದಾರೆ. ಆದ್ರೆ ಈವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಹಾಗಾಗಿ ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಆಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕಂದಾಯ ಸಚಿವರಿಗೆ ಹಾಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷ ಮಾರಸಂದ್ರ ಮಂಜುನಾಥ್, ಜಿಲ್ಲಾಧ್ಯಕ್ಷ ಡಿಎಂ ಮುನಿರಾಜು, ಜಿಲ್ಲಾ ಮುಖಂಡ ಸಂತೋಷ್ ಕುಮಾರ್, ವೀರೇನಹಳ್ಳಿ ಮಂದು.ಜಿ, ಆಂಜಿ ಕನ್ನಡಿಗ ವೆಂಕಟಾಚಲಪತಿ, ಸತೀಶ್ ಉಪಸ್ಥಿತರಿದ್ದರು.