ನಟಿ ಸಮಂತ ರುತ್ ಪ್ರಭು, ನಟ ನಾಗಾರ್ಜುನ್ ಹಾಗೂ ನಾಗ ಚೈತನ್ಯ ಬಗ್ಗೆ ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ್ದಾರೆ. ಸಾರ್ವಜನಿಕವಾಗಿ ಕೊಂಡ ಸುರೇಖಾ ಆಡಿರುವ ಮಾತುಗಳಿಗೆ ಪ್ರತಿಯೊಬ್ಬರು ತೀವ್ರ ವಿರೋಧ್ಯ ವ್ಯಕ್ತಪಡಿಸುತ್ತಿದ್ದಾರೆ. ಕೆ.ಟಿ. ರಾಮ ರಾವ್ ಅವರನ್ನು ವಿರೋಧಿಸುವ ಭರದದಲ್ಲಿ ಸುರೇಖಾ ಅವರು ಇಲ್ಲಸಲ್ಲದ ವಿಚಾರಗಳನ್ನು ಎಳೆದು ತಂದಿದ್ದು ಇದು ಸಮಂತಾ, ನಾಗಾರ್ಜುನ್ ಹಾಗೂ ನಾಗ ಚೈತನ್ಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಾಗಾರ್ಜುನ್ ಒಡೆತನದ ‘ಎನ್ ಕನ್ವೆನ್ಷನ್ ಸೆಂಟರ್ ನ ಒಡೆಯಬಾರದು ಎಂದರೆ ಸಮಂತಾನ ನನ್ನ ಬಳಿ ಕಳಿಸಿ ಅಂತ ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಕೆ.ಟಿ. ರಾಮ ರಾವ್ ಬಳಿ ಹೋಗು ಅಂತ ಸಮಂತಾಗೆ ನಾಗಾರ್ಜನ ಒತ್ತಾಯ ಮಾಡಿದರು. ಆದರೆ ಸಮಂತಾ ಒಪ್ಪಲಿಲ್ಲ. ಒಪ್ಪದಿದ್ದರೆ ಮನೆ ಬಿಟ್ಟುಹೋಗು ಅಂತ ನಾಗಾರ್ಜುನ ಹೇಳಿದರು. ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್ ನೀಡಿದರು’ ಎಂದು ಕೊಂಡ ಸುರೇಖಾ ಹೇಳಿದ್ದಾರೆ.
ಕೊಂಡ ಸುರೇಖಾ ಹೇಳಿದ ಈ ಮಾತಿನಿಂದ ನಾಗಾರ್ಜುನ ಅವರು ಗರಂ ಆಗಿದ್ದಾರೆ. ‘ಗೌರವಾನ್ವಿತ ಸಚಿವೆ ಕೊಂಡ ಸುರೇಖಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಿಮ್ಮ ವಿರೋಧಿಗಳನ್ನು ಟೀಕಿಸಲು, ರಾಜಕೀಯದಿಂದ ದೂರ ಇರುವ ಸಿನಿಮಾ ತಾರೆಯರನ್ನು ಬಳಸಿಕೊಳ್ಳಬೇಡಿ. ಇನ್ನೊಬ್ಬರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಮಹಿಳೆಯಾಗಿ ನಮ್ಮ ಕುಟುಂಬದ ಮೇಲೆ ನೀವು ಮಾಡಿದ ಆರೋಪಗಳು ಸಂಪೂರ್ಣ ತಪ್ಪು. ಕೂಡಲೇ ನಿಮ್ಮ ಹೇಳಿಕೆ ವಾಪಸ್ಸು ಪಡೆದುಕೊಳ್ಳಿ ಅಂತ ಮನವಿ ಮಾಡುತ್ತೇನೆ’ ಎಂದು ನಾಗಾರ್ಜುನ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊಂಡಾ ಸುರೇಖಾ ಅವರ ಹೇಳಿಕೆಗೆ ನಟಿ ಸಮಂತಾ ರುತ್ ಪ್ರಭು ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬರ ವೈಯಕ್ತಿಕ ವಿಚಾರಗಳನ್ನು ಗೌರವಿಸಿ, ರಾಜಕೀಯ ಜಗಳಗಳಿಂದ ನನ್ನ ಹೆಸರನ್ನು ದೂರವಿಡಿ ಎಂದು ಸಮಂತಾ ಹೇಳಿದ್ದಾರೆ.