ಜೈಪುರ: ಬಸ್ಗೆ (Bus) ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 11 ಜನ ಸಾವನ್ನಪ್ಪಿದ ಘಟನೆ ರಾಜಸ್ಥಾನದ (Rajasthan) ಭರತ್ಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ ರಾಜಸ್ಥಾನದ ಪುಷ್ಕರ್ನಿಂದ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳುತ್ತಿತ್ತು. ಈ ವೇಳೆ ಡೀಸೆಲ್ ಖಾಲಿಯಾಗಿ ಲಖನ್ಪುರದ ಅಂಟ್ರಾ ಫ್ಲೈಓವರ್ನ ಮಧ್ಯದಲ್ಲಿ ನಿಂತಿದೆ. ಈ ವೇಳೆ ವೇಗವಾಗಿ ಬಂದ ಟ್ರಕ್ ಬಸ್ಗೆ ಡಿಕ್ಕಿಯಾಗಿದೆ. ಪರಿಣಾಮ 11 ಜನ ಸಾವಿಗೀಡಾಗಿದ್ದಾರೆ. ಅಲ್ಲದೇ 12 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮುಂಜಾನೆ 4:30ರ ಸುಮಾರಿಗೆ ಈ ಅಪಘಾತ (Accident) ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಲ್ಲಿ ಐವರು ಪುರುಷರು ಹಾಗೂ ಆರು ಜನ ಮಹಿಳೆಯರು ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರೆಲ್ಲ ಗುಜರಾತ್ನಿಂದ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ. ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬಕ್ಕೆ ದೈರ್ಯ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.