ಅಮರಾವತಿ: ವಿಶಾಖಪಟ್ಟಣಂನ (Visakhapatnam) ಬಂದರಿನಲ್ಲಿ (Fishing Harbour) ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 40 ಮೀನುಗಾರಿಕಾ ದೋಣಿಗಳು (Boat) ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 30 ಕೋಟಿ ರೂ. ನಷ್ಟವಾಗಿದೆ. ಕೆಲವು ಕಿಡಿಗೇಡಿಗಳು ದೋಣಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೀನುಗಾರರು ಶಂಕಿಸಿದ್ದಾರೆ.
ಘಟನೆಯ ಬಳಿಕ ಅಗ್ನಿಶಾಮಕ ದಳ ಬೆಂಕಿ ಆರಿಸಲು ಹರಸಾಹಸ ಪಟ್ಟರು. ಕೆಲವು ದೋಣಿಗಳಲ್ಲಿ ಸಿಲಿಂಡರ್, ಇಂಧನ ಟ್ಯಾಂಕ್ಗಳಿಗೆ ಬೆಂಕಿ ತಗುಲಿದ್ದರಿಂದ ಅವಘಡ ಸಂಭವಿಸಿದ್ದು, ಪ್ರದೇಶದ ಜನರು ಘಟನೆಯಿಂದ ಭೀತಿಗೊಂಡರು. ರಾತ್ರಿ 11:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ರೆಡ್ಡಿ ತಿಳಿಸಿದ್ದಾರೆ.
ದೋಣಿಗಳಲ್ಲಿನ ಸಿಲಿಂಡರ್ಗಳು ಸ್ಫೋಟಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ನಾವು ಜನರನ್ನು ದೂರವಿರಲು ಕೇಳುತ್ತಿದ್ದೇವೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಕಾರ್ಯನಿರ್ವಹಿಸುತ್ತಿವೆ. ಬೆಂಕಿಗೆ ಕಾರಣವನ್ನು ಇನ್ನೂ ದೃಢಪಡಿಸಲಾಗಿಲ್ಲ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಆನಂದ್ ರೆಡ್ಡಿ ಮಾಹಿತಿ ನೀಡಿದ್ದಾರೆ.