ಅಹಮದಾಬಾದ್: ಟೀಂ ಇಂಡಿಯಾ (Team India) ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (Virat Kohli) 1,205 ದಿನಗಳ ಬಳಿಕ ಶತಕ ಸಿಡಿಸಿ, ಶತಕದ ಬರ ನೀಗಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 28ನೇ ಶತಕ ಬಾರಿಸಿರುವ ಕೊಹ್ಲಿ ಅವರಿಗೆ ಇದು ತಮ್ಮ ಕ್ರಿಕೆಟ್ ವೃತ್ತಿ ಜೀವನದ 75ನೇ ಶತಕವಾಗಿದೆ. ಈ ಮೂಲಕ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ.
ಪಂದ್ಯದ ಬಳಿಕ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರೊಂದಿಗೆ ಸುದೀರ್ಘವಾಗಿ ಮಾತನಾಡಿರುವ ಕೊಹ್ಲಿ, ಸೆಂಚುರಿ ಬಾರಿಸುವ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಕೊಹ್ಲಿ ಹೇಳಿದ್ದೇನು?
ನೀವು ಸೆಂಚುರಿ ಗಳಿಸಲು ಬ್ಯಾಟಿಂಗ್ ಹೇಗೆ ಮುಂದುವರಿಸುತ್ತೀರಿ ಅಂತಾ ಬಹಳ ಜನರು ನನ್ನನ್ನು ಕೇಳುತ್ತಾರೆ. ನಾನು ಯಾವಾಗಲೂ ಅವರಿಗೆ ಹೇಳುತ್ತೇನೆ, 100 ರನ್ ಬಾರಿಸಬೇಕು ಅನ್ನೋದು ನನ್ನೊಳಗೆ ನಾನೇ ಹಾಕಿಕೊಳ್ಳುವ ಗುರಿ. ಜೊತೆಗೆ ತಂಡಕ್ಕಾಗಿ ಸಾಧ್ಯವಾದಷ್ಟು ಸಮಯ ಬ್ಯಾಟಿಂಗ್ ಮಾಡಬೇಕು, ರನ್ ಗಳಿಸಬೇಕು ಅನ್ನೋದು ನನ್ನ ಉದ್ದೇಶವೇ ಹೊರತು, ಮೈಲಿಗಲ್ಲು ಸಾಧಿಸಬೇಕು ಎಂಬುದಲ್ಲ.
ಇದನ್ನು ನಾನು ಪ್ಲೇಯಿಂಗ್ ಬ್ಯೂಟಿ ಎಂದು ಭಾವಿಸುತ್ತೇನೆ. ವಿಶ್ವಟೆಸ್ಟ್ ಚಾಂಪಿನ್ಶಿಪ್ ಫೈನಲ್ಗೂ ಮುನ್ನ ಲಯಕ್ಕೆ ಮರಳಿದ್ದು ಸರಿಯಾದ ಸಮಯ. ನನಗೆ ಇದರಿಂದ ಸಂತೋಷವಾಗಿದೆ. ನಾನು ಸಾಕಷ್ಟು ನಿರಾಳವಾಗಿ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನು ಎದುರಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.