ಬೆಂಗಳೂರು: ಪಠ್ಯ ಪರಿಷ್ಕರಣೆ ಮುಂದಿನ ಸಂಪುಟದಲ್ಲೇ ಚರ್ಚೆ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಅವಶ್ಯಕತೆ ಇಲ್ಲದ್ದನ್ನು ತಜ್ಞರು ಪರಿಶೀಲಿಸಿ ತೀರ್ಮಾನಿಸುತ್ತಾರೆ. ಸಂಪುಟದಲ್ಲಿ ಇಟ್ಟೇ ತೀರ್ಮಾನವಾಗಲಿದೆ.
ಈ ಹಿಂದೆಯೂ ಸಪ್ಲಿಮೆಂಟರಿ ಪರಿಷ್ಕರಣೆ ಆಗಿದ್ದಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಒತ್ತಡ ಬೇಡ ಎಂದು ಹೇಳಿದ್ದಾರೆ. ಆರಂಭದಲ್ಲಿ ಸೇತು ಬಂಧ ಇರಲಿದೆ. ಮಕ್ಕಳು ಪಠ್ಯಕ್ಕೆ ಹೋಗಲ್ಲ. ಮತ್ತು ಪಠ್ಯದಲ್ಲಿ ಏನು ಓದಿಸಬೇಕು, ಯಾವುದು ಬೇಡ ಎಂಬುದನ್ನು ನಿರ್ಧರಿಸಲಾಗುತ್ತದೆ. ಇದು ಬಹಳ ಸೂಕ್ಷ್ಮ ವಿಚಾರವಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುತ್ತೇವೆ ಸ್ವತಃ ಸಿಎಂ (Siddaramaiah) ಅವರೇ ಈ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದಾರೆ.
ಈ ಕ್ಷಣದಲ್ಲೂ ಕೂಡ ಪಠ್ಯ ಪುಸ್ತಕ (Syllabus) ಪರಿಷ್ಕರಣೆ ಸಂಬಂಧಿಸಿ ಸಭೆ ನಡೆಯುತ್ತಿದೆ. ಸಪ್ಲಿಮೆಂಟ್ ಮಾದರಿಯ ಪುಸ್ತಕ ನೀಡುತ್ತೇವೆ. ಯಾವ ಪಾಠ ಮಾಡಬೇಕು, ಯಾವುದು ಮಾಡಬಾರದು ಎಂಬುದನ್ನೂ ತಿಳಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಕೇಸರೀಕರಣಕ್ಕೆ ಬ್ರೇಕ್ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಕ್ಕಳ ಒಳಿತಿಗೆ ಸರಿಯಾಗಿ ಕ್ರಮ ತೆಗೆದುಕೊಳ್ತೇವೆ. ಅದು ಇದು ಅಂತ ಏನೂ ಇಲ್ಲ. ತುಂಬಾ ಸೂಕ್ಷ್ಮ ವಿಚಾರಗಳಿವು. ಹಾಗಾಗಿ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಬೇಕಿದೆ. ದೊಡ್ಡ ಮಟ್ಟದ ಚರ್ಚೆಗಳ ಅವಶ್ಯಕತೆಯಿದೆ. ಹಾಗಾಗಿ ಮಕ್ಕಳ ಒಳಿತನ್ನ ನೋಡಿಯೇ ಮಾಡಬೇಕು. ಮಕ್ಕಳಿಗೆ ಒಳಿತಾಗುವಂತೆ ನಾವು ಮಾಡ್ತೇವೆ ಎಂದು ಸಚಿವರು ಹೇಳಿದರು.