ತಮಿಳುನಾಡು ರಾಜಕೀಯದಲ್ಲಿ ಅಧಿಪತಿಯಾಗುವುದಕ್ಕೆ ದಳಪತಿ ಅಖಾಡಕ್ಕೆ ಇಳಿದಿದ್ದಾರೆ. ಅದರ ಮೊದಲ ಭಾಗವಾಗಿ ತಮಿಳುಗ ವೆಟ್ರಿ ಕಳಗಂ ಪಕ್ಷ ಕಟ್ಟಿದ್ದಾರೆ. ತನಗೆ ನೇಮೂ ಫೇಮೂ ಕೊಟ್ಟ ತಮಿಳು ಮಕ್ಕಳ ಸೇವೆಗೆ ಸಿದ್ಧರಾಗಿ ನಿಂತಿದ್ದಾರೆ. ಅದಕ್ಕಾಗಿ ರಾಜಕೀಯವೇ ಅತ್ಯುತ್ತಮ ಅಂತಾ ತೀರ್ಮಾನಿಸಿ ಸಿನಿಮಾ ರಂಗಕ್ಕೆ ಕೊನೆಯ ಫುಲ್ ಸ್ಟಾಪ್ ಇಡ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ಇನ್ಮುಂದೆ ಮಾಸ್ಟರ್ ಮೇನಿಯಾವೇ ಇರೋದಿಲ್ಲ. ಯಾಕಂದ್ರೆ ಫುಲ್ ಟೈಮ್ ಪಾಲಿಟಿಕ್ಸ್ ಗೆ ಇಳಿಯುತ್ತಿರುವ ವಿಜಯ್ ಕೊನೆಯಾದಾಗಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ಕೂಡ ರಾಜಕೀಯ ಜೀವನಕ್ಕೆ ಹತ್ತಿರುವ ಕಥೆ ಅನ್ನೋದು ಇಂಟ್ರೆಸ್ಟಿಂಗ್ ಮ್ಯಾಟರ್. ಇದೆಲ್ಲದಕ್ಕಿಂತ ಹೆಚ್ಚಾಗಿ ಇಳದಳಪತಿ ವಿಜಯ್ ಕೊನೆಯ ಹಾಗೂ 69ನೇ ಚಿತ್ರವನ್ನು ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಾರಥ್ಯ ವಹಿಸಿಕೊಂಡಿದೆ.
https://x.com/KvnProductions/status/1834481009553010728
ಕೆವಿಎನ್..ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ವಿತರಣಾ ಹಾಗೂ ನಿರ್ಮಾಣ ಸಂಸ್ಥೆ. ಆರ್ ಆರ್ ಆರ್, ಸೀತಾರಾಮಂ, ಅನಿಮಲ್, ವಿಕ್ರಾಂತ್ ರೋಣ, 777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ ಹೀಗೆ ಅನೇಕ ಬ್ಲಾಕ್ಬಸ್ಟರ್ ಸಿನ್ಮಾಗಳನ್ನ ಡಿಸ್ಟ್ರಿಬ್ಯೂಷನ್ ಮಾಡಿದಂತಹ ಈ ಸಂಸ್ಥೆ ಈಗ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಸೌತ್-ನಾರ್ತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ಪ್ಯಾನ್ ವರ್ಲ್ಡ್ ಕಣ್ಣರಳಿಸಿ ನೋಡುವಂತಹ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಸದ್ಯ, ಯಶ್ ಜೊತೆ ಟಾಕ್ಸಿಕ್, ಧ್ರುವ ಜೊತೆ ಕೆಡಿ ಹಾಗೂ ಮಾರ್ಟಿನ್ ಸಿನಿಮಾಗಳು ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಅದ್ದೂರಿಯಾಗಿ ತಯಾರಾಗುತ್ತಿವೆ. ಹೀಗಿರುವಾಗಲೇ ಈ ಸಂಸ್ಥೆಯ ಅಂಗಳದಿಂದ ದೊಡ್ಡದಾಗೇ ಸಿಗ್ನಲ್ ಸಿಕ್ಕಿದೆ. ಇಳಯದಳಪತಿ ಜೊತೆ ಕೆವಿಎನ್ ಸಂಸ್ಥೆ ಕೈ ಜೋಡಿಸಿದೆ.
ಕೆವಿಎನ್ ಸಂಸ್ಥೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ಗಳಿಗೆ ಸಿನಿಮಾ ಮಾಡ್ತಿದೆ. ನ್ಯಾಷನಲ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಈಗ ತಮಿಳು ಚಿತ್ರರಂಗದ ದೊಡ್ಡ ಹೆಸ್ರು ವಿಜಯ್ 69ನೇ ಸಿನಿಮಾಗೂ ಖಜಾನೆ ತೆರೆದಿಡಲು ಸಿದ್ದವಾಗಿದೆ. ಈ ಮೂಲಕ ಕೆವಿಎನ್ ಸಂಸ್ಥೆ ತಮಿಳು ಸಿನಿಮಾರಂಗ ಪ್ರವೇಶಿಸಿದೆ. ವಲಿಮೈ, ತುನಿವು, ಚಿತ್ರಗಳ ಸಾರಥಿ ವಿನೋದ್ ಈ ಸಿನಿಮಾದ ಸೂತ್ರಧಾರ. ಹೇಳಿಕೇಳಿ ಇದು ದಳಪತಿ ಕೊನೆ ಸಿನ್ಮಾ..ಹೀಗಿದ್ಮೇಲೆ ನಿರೀಕ್ಷೆಗಳು ಜಗದಗಲವೇ ಇರುತ್ತದೆ. ಅದಕ್ಕೆ ತಕ್ಕಂತೆ ಕಥೆ ಎಣೆಯಲಾಗಿದ್ದು, ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರುವ ಕಥೆಯನ್ನು ಹರವಿಡಲಿದ್ದಾರಂತೆ ವಿನೋದ್..
ಭಾರತೀಯ ಸಿನಿರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದ್ದು, ಯಾರು, ಎಲ್ಲಿ ಬೇಕಾದರೂ ಕೆಲಸ ಮಾಡುತ್ತಾರೆ ಎನ್ನುವಂತಾಗಿದೆ. ಅದೇ ರೀತಿ ನಿರ್ಮಾಪಕ, ನಿರ್ದೇಶಕರು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಲು ಬಹಳ ಉತ್ಸುಕರಾಗುತ್ತಿದ್ದಾರೆ. ಈಗಾಗಲೇ ಹೊಂಬಾಳೆ ಸಂಸ್ಥೆ ಮಲಯಾಳಂ, ತೆಲುಗು ಸಿನಿಮಾಗಳನ್ನು ನಿರ್ಮಿಸಿದೆ. ತಮಿಳಿನಲ್ಲಿ ಎರಡು ಸಿನಿಮಾ ಘೋಷಿಸಿದೆ. ಅದೇ ಹಾದಿಯಲ್ಲಿರುವ ಕೆವಿಎನ್ ಸಂಸ್ಥೆ ಜೂನಿಯರ್ ಎನ್ ಟಿಆರ್ ನಟನೆಯ ದೇವರ, ಸೂರ್ಯ ಕಂಗುವ ಚಿತ್ರವನ್ನು ಕನ್ನಡ ಪ್ರೇಕ್ಷಕರ ಎದುರು ತರುತ್ತಿದೆ. ಈಗ ತಮಿಳು ಸಿನಿರಂಗದಲ್ಲಿಯೂ ದಾಖಲೆ ಬರೆಯಲು ವಿಜಯ್ ಜೊತೆ ಸಿನಿಮಾ ಮಾಡ್ತಿದೆ.
ತಮಿಳು ರಾಜಕೀಯ ರಂಗದಲ್ಲಿ ಹೊಸ ದಾಳ ಹಾಕ್ತಿರುವ ದಳಪತಿ ಇತ್ತೀಚೆಗಷ್ಟೇ ಗೋಟ್ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ವೆಂಕಟ್ ಪ್ರಭು ಆಕ್ಷನ್ ಕಟ್ ನಲ್ಲಿ ತಯಾರಾಗಿದ್ದ ಈ ಚಿತ್ರಕ್ಕೆ ಹೇಳಿಕೊಳ್ಳುವಷ್ಟು ರೆಸ್ಪಾನ್ಸ್ ಸಿಗದೇ ಹೋದ್ರೂ ಬಾಕ್ಸಾಫೀಸ್ ನಲ್ಲಿ ಮಾಸ್ಟರ್ ಮಿಂಚಿನ ಸಂಚಲನವನ್ನು ಸೃಷ್ಟಿಸಿದೆ. ವಿಜಯ್ ಸಿನಿಮಾ ಥಿಯೇಟರ್ ಗೆ ಲಗ್ಗೆ ಇಡ್ತು ಅಂದ್ರೆ ಅಲ್ಲಿ ಜಾತ್ರೆಯೆ ನಡೆಯುತ್ತದೆ. ನಿರ್ಮಾಪಕರು ಝಣ ಝಣ ಕಾಂಚಾಣ ಎಣಿಸಿ ಜೇಬಿಗೆ ಇಳಿಸಿಕೊಳ್ತಾರೆ. ಹೆಚ್ಚುಕಮ್ಮಿ ಅಂದ್ರೂ ದಳಪತಿ ಸಿನಿಮಾಗಳು 300 ಕೋಟಿಗೂ ಕಡಿಮೆ ಕಲೆಕ್ಷನ್ ಮಾಡೋದೇ ಇಲ್ಲ. ಅದಕ್ಕೆ ಕಾರಣ ರಜನಿಯಷ್ಟೇ ಕೀರ್ತಿ ಹೆಸ್ರು ವಿಜಯ್ ಹೆಸರಿಗಿದೆ. ಸಿನಿಮಾರಂಗದಲ್ಲಿ ನಯಾ ರೆಕಾರ್ಡ್ ಗಳನ್ನು ಕ್ರಿಯೇಟ್ ಮಾಡಿರುವ ವಿಜಯ್ ಕೊನೆ ಸಿನಿಮಾವನ್ನು ಅಷ್ಟೇ ಅದ್ಧೂರಿ ಆಡಂಬರದಿಂದ ಕೆವಿಎನ್ ಸಂಸ್ಥೆ ನಿರ್ಮಿಸ್ತಿದೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆಯಂತೆ ಜನಪ್ರಿಯ ಸಿನಿಮಾ ವಿತರಣಾ ಹಾಗೂ ನಿರ್ಮಾಣ ಸಂಸ್ಥೆಯಾಗಿ ಗುರ್ತಿಸಿಕೊಂಡಿರುವ ಕೆವಿಎನ್ ಸಂಸ್ಥೆ, ತಮಿಳು ಚಿತ್ರರಂಗದ ಮಾಸ್ಟರ್ ಗೆ ಬರೋಬ್ಬರಿ 500 ಕೋಟಿ ಫಂಡ್ ಮಾಡ್ತಿದೆ. ಬರೋಬ್ಬರಿ ಆರು ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, 2025ಕ್ಕೆ ವಿಜಯ್-ವಿನೋದ್ ಕೆವಿಎನ್ ಕಾಂಬೋದ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. ವಿಜಯ್ ತಮ್ಮ ಕೊನೆ ಚಿತ್ರದ ಚಿತ್ರೀಕರಣ ಮುಗಿಸುತ್ತಿದ್ದಂತೆ ತಮಿಳುನಾಡಿನಾದ್ಯಂತ ಪಾದಯಾತ್ರೆ ನಡೆಸಲು ತಯಾರಿ ನಡೆಸಿದ್ದಾರೆ. ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಸಂಘಟಿಸುವ ಕೆಲಸ ಮಾಡಲಿದ್ದಾರಂತೆ. ಕರುಣಾನಿಧಿ, ಜಯಲಲಿತಾ ನಿಧನದ ಬಳಿಕ ತಮಿಳುನಾಡಿನಲ್ಲಿ ಪ್ರಬಲ ನಾಯಕನ ಕೊರತೆ ಇದೆ. ಆ ಸ್ಥಾನವನ್ನು ದಳಪತಿ ತುಂಬಲಿದ್ದಾರೆ ಎಂಬ ಲೆಕ್ಕಾಚಾರ ತಮಿಳುರಾಜಕೀಯರಂಗದ ಪಡಸಾಲೆಗಳಲ್ಲಿ ಹರಿದಾಡ್ತಿದೆ. ಗೊತ್ತಿಲ್ಲ. ತೆರೆಮೇಲೆ ತಾಕತ್ತು ಪ್ರದರ್ಶಿಸಿ ಗೆದ್ದಿರುವ ವಿಜಯ್ ರಾಜಕೀಯದಲ್ಲಿಯೂ ರಾರಾಜಿಸ್ತಾರಾ? ತಮಿಳು ಮಂದಿ ದಳಪತಿಗೆ ಜೈಕಾರ ಹಾಕ್ತಾರಾ ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ.
ಮೇಘ, ಎಸ್. ಪ್ರಜಾ ಟಿವಿ, ಫಿಲ್ಮಂ ಬ್ಯೂರೋ..