ಬಣ್ಣದ ಲೋಕ ದೂರದಿಂದ ನೋಡಲು ಮಾತ್ರವೇ ಅತಿ ಸುಂದರ. ಅಲ್ಲಿ ಸಕ್ಸಸ್ ಆದವರು ಮಾತ್ರವೇ ಬದುಕಲು ಸಾಧ್ಯ. ಒದೊಮ್ಮೆ ಫೇಲ್ಯೂರ್ ಆದರೆ ಜೀವನವೇ ಮುಗಿದು ಹೋದಂತೆ. ತಾವು ಎಷ್ಟೇ ಕ್ರಿಯೇಟಿವ್ ಆಗಿದ್ರೂ, ಹಣಕಾಸು ವಿಚಾರಕ್ಕೆ ಪ್ರಾಣವನ್ನ ಕಳೆದುಕೊಂಡಿರುವ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಚಿತ್ರರಂಗ ನೋಡಿದೆ. ಇದೀಗ ಕಿರುತೆರೆ ಹಾಗು ‘ಅಶೋಕ ಬ್ಲೇಡ್’ ಸಿನಿಮಾ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ ಕಾರಣ ಏನು ಎಂಬುದರ ಬಗ್ಗೆ ವಿನೋದ್ ಅವರ ಆಪ್ತ ಸಂಭಾಷಣೆಗಾರ ವಿರೇಂದ್ರ ಮಲ್ಲಣ್ಣ ಮಾತನಾಡಿದ್ದಾರೆ. “ನಿರ್ದೇಶಕ ವಿನೋದ್ ಸಾವಿಗೆ ಅವರೇ ಶುರು ಮಾಡಿದ ಅಶೋಕ ಬ್ಲೇಡ್ ಎಂಬ ಸಿನಿಮಾ ಕಾರಣವಾಗಿದೆ.
ವಿನೋದ್ ದೋಂಡಾಲೆ ನಿರ್ದೇಶನದ ಅಶೋಕ ಬ್ಲೇಡ್ ಸಿನಿಮಾ ಮೂಕ್ಕಾಲು ಭಾಗ ಶೂಟಿಂಗ್ ಮುಗಿದಿದೆ. ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ವಿನೋದ್ 2-3 ಕೋಟಿಗೂ ಹೆಚ್ಚಿನ ಸಾಲ ಮಾಡಿದ್ರು ಎನ್ನಲಾಗಿದೆ. ಈ ಸಾಲದಿಂದ ಬೇಸತ್ತ ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ವಿನೋದ್ ಅವರು ಪಿ.ಶೇಷಾದ್ರಿ ಅವರ ಜೊತೆ 8 ವರ್ಷ ಸಿನಿಮಾ, ಧಾರಾವಾಹಿಗಳನ್ನು ಮಾಡಿ ನಂತರ ಮುಕ್ತ ಧಾರಾವಾಹಿಗೆ ಟಿ.ಎನ್. ಸೀತಾರಾಮ್ ಸರ್ ಜೊತೆಯಾದವರು. ಅಲ್ಲಿಂದ ನರಹರಿರಾವ್, ದೀಪಕ್ ಮತ್ತು ವಿನೋದ್ ಸೇರಿ ತಮ್ಮದೇ ಪ್ರೊಡಕ್ಷನ್ ಹೌಸ್ ಕಟ್ಟಿದರು. ಒಬ್ಬ ಕ್ಯಾಮರಾಮ್ಯಾನ್, ಒಬ್ಬ ನಿರ್ದೇಶಕ, ಮತ್ತೊಬ್ಬ ಪ್ರೊಡಕ್ಷನ್ ಮ್ಯಾನೇಜರ್. ಈ ಕಾಂಬಿನೇಶನ್ ವರ್ಕ್ ಆಗುವ ಸಮಯದಲ್ಲಿ ದೀಪಕ್ ಇಲ್ಲವಾದರು.
ಬಳಿಕ ನರಹರಿರಾವ್ ಹಾಗೂ ವಿನೋದ್ ಇಬ್ಬರೇ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋದರು. ಎಲ್ಲವೂ ಸರಿಯಾಗಿಯೇ ಇತ್ತು. ಇವರ ಯಶಸ್ವಿ ಪ್ರಯಾಣ ನೋಡಿ ಪ್ರತಿಯೊಬ್ಬರು ಶಹಭಾಷ್ ಎಂದಿದ್ದರು. “ವಿನೋದ್ ದೋಂಡಾಲೆ ಕರಿಮಣಿ, ಮೌನರಾಗ, ಶಾಂತಂ ಪಾಪಂ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಕಂಡವರು. ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ವಿನೋದ್ ದೋಂಡಾಲೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರ ನಿರ್ದೇಶನ ಮಾಡುತ್ತಿದ್ದರು. ಧಾರಾವಾಹಿಯ ಮೂಲಕ ಸ್ವಂತ ಸಿನಿಮಾ ಮಾಡುವಷ್ಟು ಬೆಳೆದರಲ್ಲಾ ಅಂತ ಬಹಳ ಜನರು ಗೆಳೆಯರು ಖುಷಿ ಪಟ್ಟಿದ್ರು. ಬಹುಶಃ ಧಾರಾವಾಹಿಯೇ ಮಾಡಿಕೊಂಡಿದ್ದರೆ ಎಲ್ಲವೂ ಚೆನ್ನಾಗೇ ಇರುತ್ತಿತ್ತೇನೋ. ಆದರೆ, ಸಿನಿಮಾ ಕನಸು ಅಂತೊಂದಿದೆಯಲ್ಲಾ, ಅದು ಎಲ್ಲರ ಪಾಲಿಗೂ ನನಸಾಗುವ ಸವಿಗನಸೇ ಅಲ್ಲ. ದುಃಸ್ವಪ್ನವೂ ಆಗಬಹುದು.” ಎಂದು ವಿರೇಂದ್ರ ಮಲ್ಲಣ್ಣ ಅಗಲಿದ ಸ್ನೇಹಿತನನ್ನು ನೆನೆದು ಕಂಬನಿ ಮಿಡಿದಿದ್ದಾರೆ.