ಜೈಪುರ: ʻ10 ವರ್ಷದವಳಿದ್ದಾಗ ನನ್ನನ್ನ ಮಾರಾಟ ಮಾಡಿದ್ರು, ಅಂದಿನಿಂದ ಕಾಲ ಕಾಲಕ್ಕೆ ನನ್ನ ದೇಹವನ್ನು ಮಾರಾಟ ಮಾಡಿ ಕೋಟಿಗಟ್ಟಲೇ ಸಂಪಾದಿಸಿದ್ರು. ನಾನೀಗ ನೊಂದಿದ್ದೇನೆ, ನನಗೆ ನ್ಯಾಯ ಕೊಡಿಸಿ..ʼ ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕಿ ನರಳುತ್ತಿದ್ದ ಸಂತ್ರಸ್ತೆಯೊಬ್ಬಳ ಕೂಗು ಇದಾಗಿದೆ.
ಹೌದು. ರಾಜಸ್ಥಾನದ (Rajasthan) ಬಿಲ್ವಾರದಲ್ಲಿ 10 ವರ್ಷಗಳ ಹಿಂದೆ ಮಾರಾಟವಾಗಿ ವೇಶ್ಯಾವಾಟಿಕೆ ದಂಧೆಗೆ ಸಿಲುಕಿದ್ದ ಹುಡುಗಿಯೊಬ್ಬಳು (Girl) 8-9 ವರ್ಷಗಳ ಬಳಿಕ ತನ್ನ ಕರಾಳ ಕತೆಯನ್ನು ಹೇಳಿಕೊಂಡಿದ್ದಾಳೆ. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವೀಡಿಯೋ ಮಾಡಿಬಿಟ್ಟಿರುವ ಸಂತ್ರಸ್ತೆ ತನ್ನನ್ನು ರಕ್ಷಿಸುವಂತೆ ಪೊಲೀಸರಿಗೆ ಕೇಳಿಕೊಂಡಿದ್ದಾಳೆ.
ಸಂತ್ರಸ್ತೆವೀಡಿಯೋದಲ್ಲಿಹೇಳಿರುವುದೇನು?
ʻಹಲೋ ನಾನು ಸ್ವಂತ ಇಚ್ಛೆಯ ಮೇಲೆ ಈ ವೀಡಿಯೋ ಮಾಡುತ್ತಿದ್ದೇನೆ. ನಾನು 10 ವರ್ಷದವಳಿದ್ದಾಗ ಮಾಧೋಪುರದಲ್ಲಿ ನನ್ನನ್ನು ಮಾರಾಟ ಮಾಡಿದರು. 11ನೇ ವರ್ಷದಲ್ಲಿ ಬಲವಂತವಾಗಿ ನನ್ನನ್ನ ವೇಶ್ಯಾವಾಟಿಕೆಗೆ ತಳ್ಳಿದರು. ಒಂದೆರಡು ವರ್ಷ ಮಾಧೋಪುರದಲ್ಲಿ ಇಟ್ಟುಕೊಂಡು ನಂತರ ನನ್ನನ್ನು ಬೇರೆ ಸ್ಥಳಕ್ಕೆ ಮಾರಾಟ ಮಾಡಿದರು. ಇಲ್ಲಿನ ಡಿಯೋಲಿ ನಗರದಲ್ಲಿ ಕಿಶನ್ ಎಂಬ ವ್ಯಾಪಾರಿ 20 ಲಕ್ಷ ರೂ.ಗೆ ನನ್ನನ್ನು ಖರೀದಿಸಿ 8-9 ವರ್ಷಗಳ ಕಾಲ ನನ್ನನ್ನು ಬಳಸಿಕೊಂಡು ವ್ಯಾಪಾರ ಮಾಡಿಕೊಂಡ.
ನಂತರ ಜೈಪುರ, ಮುಂಬೈಗೆ (Mumbai) ಮಾರಾಟ ಮಾಡಿದ. ಅಲ್ಲಿಯೂ ಕೋಟ್ಯಂತರ ರೂಪಾಯಿ ಸಂಪಾದಿಸಿಕೊಟ್ಟೆ. ಆದರೆ ಶಂಭು ಮತ್ತು ಪ್ರೇಮ್ ಎಂಬ ಇಬ್ಬರು ಕಾಮುಕರು ನನಗೆ ಸಾಕಷ್ಟು ಹಿಂಸೆ ನೀಡಿದರು. ನನಗಷ್ಟೇ ಅಲ್ಲದೇ ಇತರ ಹೆಣ್ಣುಮಕ್ಕಳನ್ನೂ ಹಿಂಸಿಸುತ್ತಿದ್ದರು. ಬೇರೆ ಬೇರೆ ಕಡೆ ವ್ಯಾಪಾರ ಮಾಡುವಂತೆ ಒತ್ತಾಯ ಮಾಡಿದ್ದರು.
ಆದರೂ ನಾನು ಹಿಂಸೆಯನ್ನೆಲ್ಲಾ ಸಹಿಸಿಕೊಂಡು ಕೋಟ್ಯಂತರ ರೂಪಾಯಿ ಸಂಪಾದಿಸಿಕೊಟ್ಟೆ. ಆದರೀಗ ನಾನು ಇಂತಹ ದೌರ್ಜನ್ಯಗಳಿಂದ ಬೇಸತ್ತಿದ್ದೇನೆ, ತುಂಬಾ ನೊಂದಿದ್ದೇನೆ. ಅವರಿಂದ ನಾನು ತಪ್ಪಿಸಿಕೊಂಡು ಈ ವೀಡಿಯೋ ಮಾಡುತ್ತಿದ್ದೇನೆ. ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾಳೆ. ಮುಂದುವರಿದು ಆ ನೀಚರು ಎಷ್ಟೋ ಹೆಣ್ಣುಮಕ್ಕಳ ಜೀವನ ನಾಶ ಮಾಡಿದ್ದಾರೆ. ನಾನು ನನ್ನ ಬಾಲ್ಯವನ್ನು ಕಳೆದುಕೊಂಡಿದ್ದೇನೆ. ಆದ್ದರಿಂದ ಮತ್ತೆ ನನ್ನ ಊರಿಗೆ ವಾಪಸ್ ಹೋಗುವುದಿಲ್ಲ ಎಂದು ಅಲವತ್ತುಕೊಂಡಿದ್ದಾಳೆ.
ವೀಡಿಯೋ ಆಧರಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (Commission for Protection of Child Rights) ಆಯುಕ್ತರು ಬಿಲ್ವಾರಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ವೇಳೆ 27 ಮಕ್ಕಳು ನಾಪತ್ತೆಯಾಗಿರುವುದು ಕಂಡುಬಂದಿದೆ.ಇನ್ನೂ ವೀಡಿಯೋ ಆಧರಿಸಿ ಕೇಸ್ ದಾಖಲಿಸಿಕೊಂಡಿರುವ ಬಿಲ್ವಾರ ಎಸ್ಪಿ ಆದರ್ಶ್ ಸಿಧು, ಸಂತ್ರಸ್ತೆಯನ್ನು ಪತ್ತೆಮಾಡಲಾಗಿದೆ. ಬಾಲಕಿ ವೀಡಿಯೋದಲ್ಲಿ ಮಾಡಿರುವ ಆರೋಪಗಳ ಮೇರೆಗೆ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆಕೆಯನ್ನ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.