ಬೆಂಗಳೂರು ;- ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿ ಪೆಟ್ರೋಲ್ ಸುರಿದು ಶವ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ಈ ಘಟನೆ ಬೆಳಕಿಗೆ ಬಂದಿತ್ತು, ಆನಂದ್ ಎಂಬಾತನನ್ನು ಕೊಲೆ ಮಾಡಿದ ಆರೋಪಡಿ ಸತೀಶ್, ಪುಟ್ಟ ಹಾಗೂ ದಯಾನಂದ್ ಎಂಬುವರನ್ನು ಬಂಧಿಸಲಾಗಿದೆ.
ಈ ಆರೋಪಿಗಳು ಕಳೆದ ಜುಲೈ 2 ರಂದು ಆನಂದ್ನನ್ನು ಹತ್ಯೆ ಮಾಡಿದ್ದರು. ಚನ್ನನಾಯಕನಪಾಳ್ಯದ ನಿರ್ಜನ ಪ್ರದೇಶದ ಬಯಲಿನಲ್ಲಿ ಶವ ಕಂಡುಬಂದಿದ್ದು, ಬೇರೆಡೆ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಕೃತ್ಯಕ್ಕೂ ಮುನ್ನ ಸ್ಥಳದಲ್ಲಿ ಮದ್ಯಪಾನ ಸೇವಿಸಿರುವುದು, ಕಸದ ರಾಶಿಯ ಮೇಲೆ ಶವ ಇರಿಸಿ ಬೆಂಕಿ ಹಚ್ಚಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿತ್ತು. ಪ್ರಕರಣವನ್ನು ಚುರುಕುಗೊಳಿಸಿದ ಪೊಲೀಸರು 1 ವಾರದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.