ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ಟ್ರಂಪ್ ಹತ್ಯೆಗೆ ಯತ್ನ ನಡೆದಿತ್ತು. ಇದೀಗ ಮೂರನೇ ಭಾರಿ ಮತ್ತೆ ದುಷ್ಕರ್ಮಿಗಳು ಡೋನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಭಾನುವಾರ ಕ್ಯಾಲಿಪೋರ್ನಿಯಾದ ಕೋಚೆಲ್ಲಾ ವ್ಯಾಲಿಯಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ನಕಲಿ ಪಾಸ್ನೊಂದಿಗೆ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡುಗಳಿಂದ ತುಂಬಿಕೊಂಡಿದ್ದ ಶಾಟ್ಗನ್ ಹಾಗೂ ಹ್ಯಾಂಡ್ಗನ್ ಅನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ನಾವು ಭಾಗಶಃ ಟ್ರಂಪ್ ಅವರ ಮತ್ತೊಂದು ಹತ್ಯೆ ಯತ್ನವನ್ನು ತಡೆದಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಬಂಧಿತನನ್ನು 49 ವರ್ಷದ ಲಾಸ್ ವೇಗಾಸ್ ಮೂಲದ ವೆಮ್ ಮಿಲ್ಲರ್ ಎಂದು ಗುರುತಿಸಲಾಗಿದ್ದು ಈತ ನಕಲಿ ಪ್ರೆಸ್ ಪಾಸ್ ಇಟ್ಟುಕೊಂಡು ರ್ಯಾಲಿ ಪ್ರವೇಶಿಸಿದ್ದ. ಆತನನ್ನು ಆರಂಭದಲ್ಲೇ ತಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಜುಲೈ ಹಾಗೂ ಸೆಪ್ಟೆಂಬರ್ನಲ್ಲಿ ಎರಡು ಬಾರಿ ಟ್ರಂಪ್ ಅವರ ಹತ್ಯೆ ಯತ್ನ ನಡೆದಿತ್ತು. ಅದರಲ್ಲೂ ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದ ಹತ್ಯೆ ಯತ್ನದಲ್ಲಿ ಟ್ರಂಪ್ ಅವರು ಬಲ ಕಿವಿಗೆ ಗಾಯವಾಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು.