ಪೊಲೀಸರ ಮೇಲೆ ಲಾಂಗ್ ಬೀಸಲು ಯತ್ನಿಸಿದ್ದ ಆರೋಪಿಗೆ ಗುಂಡೇಟು..!

ಬೆಂಗಳೂರು

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿ ಸಿರುವ ಘಟನೆ ಯಲಹಂಕದ ಮಾದವಾರದ ನವಿಲೆ ಬಡಾವಣೆಯಲ್ಲಿ ನಡೆದಿದೆ. ಮಾಚೋಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ ರಾಜರಾಜನ್ ಅಲಿಯಾಸ್‌ ಸೇಠು ಎಂಬಾತನ ಕಾಲಿಗೆ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಫೈರಿಂಗ್ ಮಾಡಿದ್ದಾರೆ. ರಾಜರಾಜನ್ ನವೆಂಬರ್ 15ರಂದು ರೌಡಿಶೀಟರ್ ನಟರಾಜ ಅಲಿಯಾಸ್‌ ಮುಳ್ಳು ಎಂಬಾತನನ್ನು ಹತ್ಯೆ ಮಾಡಿದ್ದ.

ಪ್ರಕರಣ ಸಂಬಂಧ ಆರೋಪಿಯನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಕೃತ್ಯಕ್ಕೆ ಬಳಸಿದ ಲಾಂಗ್ ವಶಕ್ಕೆ ಪಡೆಯಲು ಪೊಲೀಸರು ಸ್ಥಳಕ್ಕೆ ತೆರಳಿದ್ದಾಗ ಪೊಲೀಸರ ಮೇಲೆ ಲಾಂಗ್ ಬೀಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.