ಉಡುಪಿ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಮತಎಣಿಕೆಯ ಕಾರ್ಯ ಆರಂಭವಾಗಿದೆ.ಉಡುಪಿಯ ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿಯ ಚುನಾವಣಾ ಏಜೆಂಟ್ ಒಬ್ಬರು ಮತಎಣಿಕೆ ಕೇಂದ್ರದೊಳಗೆ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.
ಆತ, ತನ್ನ ಬಲಗಾಲಿಗೆ ಮೊಬೈಲ್ ಕಟ್ಟಿಕೊಟ್ಟಿದ್ದ. ಪಂಚೆ ಸುತ್ತಿಕೊಂಡಿದ್ದರಿಂದ ಮೊಬೈಲ್ ಕಾಣುವುದಿಲ್ಲ ಎಂಬುದು ಆತನ ಲೆಕ್ಕಾಚಾರವಾಗಿತ್ತು. ಆದರೆ, ಪ್ರವೇಶದ್ವಾರದಲ್ಲಿ ಎಲ್ಲರನ್ನು ತಪಾಸಣೆ ಮಾಡುವಾಗ ಪೊಲೀಸರ ಕೈಗೆ ಆತನ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆತನ ಮೊಬೈಲ್ ಕಸಿದುಕೊಂಡು ಆತನನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಇದರ ನಡುವೆಯೇ ಮಂಗಳೂರಿನಲ್ಲಿ ಸ್ಟ್ರಾಂಗ್ ರೂಂ (ಮತಪೆಟ್ಟಿಗೆ ಇಟ್ಟಿರುವ ಕೋಣೆ) ಕೊಠಡಿ ಓಪನ್ ಆಗದೇ ಅಧಿಕಾರಿಗಳಿಗೆ ಇರುಸು ಮುರುಸು ಉಂಟಾಗಿರುವ ಘಟನೆಯೊಂದು ನಡೆದಿದೆ. ಮಂಗಳೂರಿನ ಸುರತ್ಕಲ್ ಕಾಲೇಜಿನಲ್ಲಿ ಮತ ಪೆಟ್ಟಿಗೆಗಳನ್ನು ಭದ್ರವಾಗಿ ಇಡಲಾಗಿತ್ತು. ಇಂದು ಬೆಳಗ್ಗೆ ಅಧಿಕಾರಿಗಳು ಆಗಮಿಸಿ, ಸ್ಟ್ರಾಂಗ್ ರೂಂ ಬಾಗಿಲು ತೆರೆಯಲು ಯತ್ನಿಸಿದಾಗ ಬಾಗಿಲು ಓಪನ್ ಆಗಿರಲಿಲ್ಲ!
ಸ್ಟ್ರಾಂಗ್ ರೂಂಗೆ ಮೂರು ಕೀಲಿಕೈಗಳಿದ್ದವು. ಆ ಮೂರನ್ನು ಬಳಸಿದರೂ ಲಾಕ್ ಓಪನ್ ಆಗಲೇ ಇಲ್ಲ. ಹಾಗಾಗಿ, ಕಡೆಗೆ ಬಡಗಿಯೊಬ್ಬನನ್ನು ಕರೆದುಕೊಂಡು ಬಂದು ಬಾಗಿಲು ಒಡೆದು ಸ್ಟ್ರಾಂಗ್ ರೂಂ ಗಳಲ್ಲಿದ್ದ ಮತಯಂತ್ರಗಳನ್ನು ಕೌಂಟಿಂಗ್ ಹಾಲ್ ಗೆ ಕೊಂಡೊಯ್ಯಲಾಯಿತು. ಹಾಗಾಗಿ, ಈ ಕೇಂದ್ರದಲ್ಲಿ ಮತಎಣಿಕೆ ಸ್ವಲ್ಪ ತಡವಾಗಿ ಆರಂಭವಾಗಿದೆ.