ಮುಂಬೈ: ಕೇರಳದಲ್ಲಿ ಭಾನುವಾರ ರಾತ್ರಿ , ಸಹ ಪ್ರಯಾಣಿಕನೊಂದಿಗೆ ಜಗಳವಾಡಿ ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ (Central Intelligence) ಮತ್ತು ಭಯೋತ್ಪಾದನಾ ನಿಗ್ರಹ (Anti Terrorism) ಅಧಿಕಾರಿಗಳ ಜಂಟಿ ತಂಡ ಬುಧವಾರ ಶಂಕಿತ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾರುಖ್ ರೈಲಿಗೆ ಬೆಂಕಿ ಹಚ್ಚಿದ ಶಂಕಿತ ಆರೋಪಿಯಾಗಿದ್ದು, ಮಹಾರಾಷ್ಟ್ರದ (Maharashtra) ರತ್ನಗಿರಿ (Ratnagiri) ಜಿಲ್ಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಕೇರಳ ಪೊಲೀಸರ ತಂಡವೂ ರತ್ನಗಿರಿ ತಲುಪಿದ್ದು, ಶಂಕಿತ ಆರೋಪಿಯನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ಹಿಂದಿನ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ (Kozhikode) ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದ ವಾದದ ನಂತರ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಕಣ್ಣೂರು ನಿಲ್ದಾಣದಲ್ಲಿ ರೈಲಿನ ಕೋಚ್ಗಳನ್ನು ಪರೀಕ್ಷಿಸಿ ವಿಧಿವಿಜ್ಞಾನ ಸಾಕ್ಷಿಗಳನ್ನು ಸಂಗ್ರಹಿಸಿದೆ. ಘಟನೆಯ ವೇಳೆ ಅಲ್ಲಿದ್ದ ಕೆಲವು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯನ್ನೂ NIA ವಿಚಾರಣೆಗೊಳಪಡಿಸಿದೆ.
ಪ್ರಕರಣದ ತನಿಖೆಗಾಗಿ ಕೇರಳ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಅಲ್ಲದೇ ಶಂಕಿತ ಆರೋಪಿಯ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾರಿಯಾಗಿದ್ದ ರಜಾಕ್ ನೀಡಿದ ಸಾಕ್ಷಿ ವಿವರಣೆಯ ಆಧಾರದ ಮೇಲೆ ಪೊಲೀಸರು ಶಂಕಿತ ಆರೋಪಿಯ ರೇಖಾಚಿತ್ರವನ್ನೂ ಬಿಡಿಸುವ ಮೂಲಕ (Sketch) ಬಿಡುಗಡೆ ಮಾಡಿದ್ದರು. ರೇಖಾಚಿತ್ರವು ಗಡ್ಡ ಮತ್ತು ಕ್ಯಾಪ್ ಹೊಂದಿರುವ ವ್ಯಕ್ತಿಯನ್ನು ಒಳಗೊಂಡಿದ್ದು, ಗಾಢ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ. ಆತನ ಬಗ್ಗೆ ಯಾವುದೇ ಮಾಹಿತಿ ದೊರೆತರೂ ತಕ್ಷಣವೇ ತಿಳಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.
ಅಲಪ್ಪುಳ- ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲು ಕೋಝಿಕ್ಕೋಡ್ ನಗರವನ್ನು ದಾಟಿ ಕೇರಳದ (Kerala) ಕೊರಾಪುಳ ರೈಲ್ವೆ ಸೇತುವೆಯನ್ನು ತಲುಪಿತ್ತು. ಈ ವೇಳೆ ಅನಾಮಿಕನೊಬ್ಬ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ, ನಂತರ ಆತನಿಗೆ ಬೆಂಕಿ (Fire) ಹಚ್ಚಿದ ಪರಿಣಾಮ 9 ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದ ಕೂಡಲೇ ವ್ಯಕ್ತಿ ಪರಾರಿಯಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಅದರಲ್ಲೂ 5 ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕೋಝಿಕ್ಕೋಡ್ನ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.