ಕೋಲ್ಕತ್ತಾ:– ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅವರ ಬರ್ಬರ ಕೊಲೆಯಾಗಿದೆ. ಚಿಕಿತ್ಸೆಗೆಂದು ಪಶ್ಚಿಮ ಬಂಗಾಳದ ಕೋಲ್ಕತ್ತಾಕ್ಕೆ ಬಂದು ನಿಗೂಢವಾಗಿ ಕಣ್ಮರೆಯಾಗಿದ್ದ ಅವರ ಶವ ಪತ್ತೆಯಾಗಿದೆ.
ಕೋಲ್ಕತ್ತಾದ ನ್ಯೂ ಟೌನ್ನಲ್ಲಿರುವ ಮನೆಯೊಂದರಲ್ಲಿ ಅಜೀಂ ಮೃತದೇಹ ಸಿಕ್ಕಿದ್ದು, ಇದೊಂದು ಪೂರ್ವ ನಿಯೋಜಿತ ಕೊಲೆ ಎನ್ನಲಾಗಿದೆ.
ದೀರ್ಘಾಕಾಲಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಜೀಂ ದರ್ಶನಾ ಗಡಿ ಮೂಲಕ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಅದೇ ದಿನ ಬಾರಾನಗರ್ನಲ್ಲಿರುವ ಅವರ ಸ್ನೇಹಿತಿ ಗೋಪಾಲ್ ಬಿಸ್ವಾಸ್ ಮನೆಗೆ ತೆರಳಿದ್ದರು. ಎರಡು ದಿನಗಳ ನಂತರ ಮೇ 14ರಂದು ಅವರು ಸ್ನೇಹಿತನ ಮನೆಯಿಂದ ಇಲ್ಲೇ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟಿದ್ದರು. ಅಂದೇ ಅಥವಾ ಮರುದಿನ ವಾಪಾಸ್ ಬರುವುದಾಗಿ ಗೋಪಾಲ್ ಬಿಸ್ವಾಸ್ಗೆ ಅಜೀಂ ಹೇಳಿ ಹೋಗಿದ್ದರು. ಇದಾದ ಬಳಿಕ ಅವರು ವಾಪಾಸ್ ಮರಳಿ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ಗೋಪಾಲ್ ಪೊಲೀಸರಿಗೆ ದೂರು ನೀಡಿ ಘಟನೆ ಬಗ್ಗೆ ಹೇಳಿದರು.