ಇಂದೋರ್: ಮಹಿಳೆಯು ಬೀದಿಯಲ್ಲಿ ಭಿಕ್ಷೆ ಬೇಡಿಯೇ ಕೇವಲ ಒಂದೂವರೆ ತಿಂಗಳಲ್ಲಿ 2.5 ಲಕ್ಷ ರೂ. ಗಳಿಸಿರುವುದು ಪತ್ತೆಯಾಗಿದೆ! ಇಂದೋರ್-ಉಜ್ಜಯಿನಿ ರಸ್ತೆಯಲ್ಲಿರುವ ಲುವ್ ಕುಶ್ ಸ್ಕ್ವೇರ್ ಎಂದೂ ಕರೆಯಲ್ಪಡುವ ಭಾವ್ರಾಸ್ಲಾ ಚೌಕದಲ್ಲಿ ಐದು ಜನರ ಕುಟುಂಬ ಭಿಕ್ಷೆ ಬೇಡುವುದನ್ನು ಅಧಿಕಾರಿಗಳು ಕಂಡುಕೊಂಡ ನಂತರ ಭಿಕ್ಷುಕಿಯನ್ನು ಆಕೆಯ ಎಂಟು ವರ್ಷದ ಮಗಳ ಜೊತೆಯಲ್ಲಿ ರಕ್ಷಿಸಲಾಯಿತು.
ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಅವರು ಇಂದೋರನ್ನು ಭಿಕ್ಷುಕಮುಕ್ತ ನಗರ ಮಾಡುವ ನಿಟ್ಟಿನಲ್ಲಿ ನಗರದಾದ್ಯಂತ ಸ್ಟಾಕ್ ಟೇಕ್ ಮಾಡಲು ಆದೇಶಿಸಿದ ನಂತರ ಪತಿ, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಕೇವಲ ಮಹಿಳೆಯೊಬ್ಬಳೇ ಕಳೆದ 45 ದಿನಗಳಲ್ಲಿ 2.5 ಲಕ್ಷ ರೂ. ಗಳಿಸಿದ್ದಾಳೆ.
ಇದರಲ್ಲಿ 1 ಲಕ್ಷ ರೂ.ಗಳನ್ನು ರಾಜಸ್ಥಾನದಲ್ಲಿ ತಮ್ಮ ಅಜ್ಜಿಯೊಂದಿಗೆ ವಾಸಿಸುವ ಇತರ ಇಬ್ಬರು ಮಕ್ಕಳ ಮನೆಗೆ ಕಳುಹಿಸಲಾಗಿದೆ ಮತ್ತು 50,000 ರೂ.ಗಳನ್ನು ಬ್ಯಾಂಕ್ನಲ್ಲಿ ಸ್ಥಿರ ಠೇವಣಿ ಇರಿಸಲಾಗಿದೆ. ಇನ್ನು 50,000 ರೂ.ಗಳನ್ನು ಕುಟುಂಬದಿಂದ ಬಹಿರಂಗಪಡಿಸದ, ವೈಯಕ್ತಿಕ ವೆಚ್ಚಗಳಿಗಾಗಿ ಖರ್ಚು ಮಾಡಲಾಗಿದೆ. ಕುಟುಂಬದ ಮೂವರು ವಿಚಾರಣೆ ಸಮಯದಲ್ಲಿ ಓಡಿ ಹೋಗಿದ್ದಾರೆ.
ಆ ಸಮಯದಲ್ಲಿ ಮಹಿಳೆಯ ಬಳಿ 19,200 ರೂ ಇತ್ತು. ಅದು ಕಳೆದ 7 ದಿನಗಳಿಂದ ತನ್ನ ಗಳಿಕೆಯಾಗಿದೆ ಎಂದು ಆಕೆ ಹೇಳಿದ್ದಾಳೆ. ಬೆಳಗ್ಗೆಯಿಂದ ಮಧ್ಯಾಹ್ನ 1:30ರವರೆಗೆ ಭಿಕ್ಷೆ ಬೇಡುವ ಮೂಲಕ ಅವರ ಮಗಳು ಹೆಚ್ಚುವರಿಯಾಗಿ 600 ರೂ. ಗಳಿಸುತ್ತಾಳೆ ಎಂದು ತಿಳಿಸಲಾಗಿದೆ. ಅಲ್ಲಿಗೆ ಈ ಭಿಕ್ಷುಕಿಯ ವಾರ್ಷಿಕ ಆದಾಯವು 20 ಲಕ್ಷ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಇದು ತೀರ್ಥಯಾತ್ರೆ ಸಮಯದಲ್ಲಿ ಹರಿದು ಬರುವ ದೊಡ್ಡ ಜನದಟ್ಟಣೆಯ ಸಮಯವನ್ನು ಹೊರಪಡಿಸಿದ ಗಳಿಕೆ ಮೊತ್ತವಾಗಿದೆ. ದೇಶದ ಎಲ್ಲಾ ತೆರಿಗೆದಾರರಲ್ಲಿ ಕೇವಲ 1.3% ರಷ್ಟು ಮಾತ್ರ 20 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ. ಒಟ್ಟಾರೆಯಾಗಿ, ಕುಟುಂಬವು ವಿವಿಧ ನಗರಗಳಲ್ಲಿ ಭೂಮಿ, ಮನೆ, ಕಾರುಗಳು, ಸ್ಮಾರ್ಟ್ಫೋನ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಹೊಂದಿದೆ.