ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರಾಫತ್ ಅವರ ಮೃತದೇಹ ಅಮೆರಿಕದ ಕ್ಲೀವ್ಲ್ಯಾಂಡ್ ನಗರದಲ್ಲಿ ಪತ್ತೆಯಾಗಿದೆ.
ಹೈದರಾಬಾದ್ನ ನಾಚರಾಮ್ ಮೂಲದ 25 ವರ್ಷದ ಮೊಹಮ್ಮದ್ ಅಬ್ದುಲ್ ಅರಾಫತ್ ಕಳೆದ ವರ್ಷ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅವರು ಕ್ಲೀವ್ಲ್ಯಾಂಡ್ ಯುನಿವರ್ಸಿಟಿಯಲ್ಲಿ ಐಟಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದರು.
ಭಾರತೀಯ ವಿದ್ಯಾರ್ಥಿಯ ಹುಡುಕಾಟದ ವೇಳೆ ಓಹಿಯೋದ ಕ್ಲೀವ್ಲ್ಯಾಂಡ್ನಲ್ಲಿ ಮೃತದೇಹ ಪತ್ತೆಯಾಗಿದೆ. ಇದು ನಿಜಕ್ಕೂ ದುಃಖಕರ ವಾರ್ತೆ ಎಂದು ನ್ಯೂಯಾರ್ಕ್ನ ಭಾರತದ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ.
ಅರಾಫತ್ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಅವರು ಸಾವಿನ ಬಗ್ಗೆ ನಿಖರ ತನಿಖೆಗಾಗಿ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಅಂತ್ಯಕ್ರಿಯೆಗಾಗಿ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.