ಲಕ್ನೋ: ಹೋಳಿ ಸಂಭ್ರಮಾಚರಣೆ ವೇಳೆ ಮುಸ್ಲಿಂ ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಬಿಜ್ನೋರ್ನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಮುಸ್ಲಿಂ ದಂಪತಿ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಸ್ಥಳದಲ್ಲೇ ಹೋಳಿ ಸಂಭ್ರಮಾಚರಣೆ ಮಾಡುತ್ತಿದ್ದ ಗುಂಪೊಂದು, ಬೈಕ್ನಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದಿದ್ದಾರೆ.
ಅಲ್ಲದೇ ಪೈಪ್ ಮೂಲಕ ಮಹಿಳೆ ಮೇಲೆ ನೀರು ಹಾರಿಸಿದ್ದಾರೆ. ಇದಕ್ಕೆ ಮಹಿಳೆ ವಿರೋಧಿಸಿದರೂ ಗುಂಪು ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಮುಸ್ಲಿಂ ಮಹಿಳೆ ಮುಖಕ್ಕೆ ಬಲವಂತವಾಗಿ ಬಣ್ಣ ಬಳಿದಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಹಿಳೆ ಇದಕ್ಕೆ ವಿರೋಧಿಸಿದ್ದಕ್ಕೆ, ‘ಇದು 70 ವರ್ಷಗಳ ಹಿಂದಿನ ಸಂಪ್ರದಾಯ’ ಎಂದು ಗುಂಪು ಹೇಳಿದೆ. ಕೊನೆಗೆ ಗುಂಪಿನಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ವ್ಯಕ್ತಿ ವೇಗವಾಗಿ ಬೈಕ್ ಚಲಾಯಿಸುತ್ತಾರೆ. ಅವರ ಮುಂದೆ ಹೋಗುತ್ತಿದ್ದಂತೆ, ಹುಡುಗರ ಗುಂಪು ಧಾರ್ಮಿಕ ಘೋಷಣೆ ಕೂಗಿರುವ ದೃಶ್ಯವೂ ವೀಡಿಯೋದಲ್ಲಿದೆ.
ವಿಡಿಯೋ ವೈರಲ್ ಆದ ಕೂಡಲೇ ಬಿಜ್ನೋರ್ ಪೊಲೀಸ್ ಮುಖ್ಯಸ್ಥ ನೀರಜ್ ಕುಮಾರ್ ಜದೌನ್, ಸ್ಥಳೀಯ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಧಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ವೈರಲ್ ವಿಡಿಯೋವನ್ನು ಸ್ಕ್ಯಾನ್ ಮಾಡಿ ಅದರಲ್ಲಿ ಭಾಗಿಯಾದವರನ್ನು ಗುರುತಿಸಿದ್ದಾರೆ.
ಸ್ವಯಂಪ್ರೇರಣೆಯಿಂದ ಮಹಿಳೆಗೆ ನೋವುಂಟು ಮಾಡುವುದು ಮತ್ತು ಹಲ್ಲೆ ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ಅನಿರುದ್ಧ್ ಎಂಬಾತನನ್ನು ಬಂಧಿಸಿದ್ದು, ಮೂವರು ಬಾಲಾಪರಾಧಿಗಳನ್ನು ವಶಕ್ಕೆ ಪಡೆದಿದ್ದಾರೆ.