ಬೆಂಗಳೂರು: ಮನೆ ಮಹಡಿಯಿಂದ ಆಯತಪ್ಪಿ ಬಿದ್ದ ಬಾಲಕಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಸಾವಿನಲ್ಲೂ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಾಸವಿರುವ ಕೃತಿ ಜೈನ್, ಕಳೆದ ಮೇ 24 ರಂದು ಮನೆಯ ಮಹಡಿ ಮೇಲೆ ತನ್ನ ಸಹೋದರ ಸಂಬಂಧಿಗಳೊಂದಿಗೆ ಆಟ ಆಡುತ್ತಿದ್ದರು. ಈ ವೇಳೆ ಆಯತಪ್ಪಿ 8 ರಿಂದ 10 ಅಡಿ ಮೇಲಿನಿಂದ ಬಿದ್ದಿದ್ದಳು.
ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಸತತ ಪರಿಶ್ರಮದ ನಡುವೆಯೂ ಮೇ 28 ರಂದು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಆಕೆಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಲಾಯಿತು. ಕೃತಿ ಅಗಲಿಕೆಯ ದುಃಖದಲ್ಲೂ ಕುಟುಂಬಸ್ಥರು ಆಕೆಯ ಅಂಗಾಂಗಳನ್ನು ದಾನ ಮಾಡುವ ಧೈರ್ಯದ ನಿರ್ಧಾರ ಮಾಡಿದ್ದಾರೆ.
ಜೀವ ಸಾರ್ಥಕತೆ ಸಂಸ್ಥೆಯೊಂದಿಗೆ ಸಮನ್ವಯದಿಂದ ಅಂಗಾಂಗಗಳ ದಾನ ಪ್ರಕ್ರಿಯೆ ನಡೆಸಲಾಗಿದೆ. ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆ ಯಶಸ್ವಿಯಾಗಿ ಕೃತಿ ಅವರ ಶ್ವಾಸಕೋಶ, ಯಕೃತ್, ಮೂತ್ರಪಿಂಡಗಳು, ಹೃದಯದ ಕವಾಟ ಮತ್ತು ಅಕ್ಷಿಪಟಲಗಳನ್ನು ಪಡೆದುಕೊಂಡಿದೆ. ಅಪಾಯಕಾರಿ ಪರಿಸ್ಥಿತಿಯಲ್ಲಿದ್ದವರಿಗೆ ಅಂಗಾಂಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಶ್ವಾಸಕೋಶವನ್ನು ಚೆನ್ನೈಗೆ ವಾಯುಮಾರ್ಗದ ಮೂಲಕ ರವಾನಿಸಿದ್ದು, ಉಳಿದ ಅಂಗಾಂಗಳನ್ನು ಕರ್ನಾಟಕದಲ್ಲಿಯೇ ಕಸಿ ಮಾಡಿ ಹಲವು ಜೀವಗಳನ್ನು ರಕ್ಷಿಸಲಾಗಿದೆ.