ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ವಿಧಾನಸಭಾ ಚುನಾವಣೆ ಸೋಲಿನ ನಂತರ ಹೈಕಮಾಂಡ್ ಕೂಡ ಲೆಕ್ಕಕ್ಕಿಲ್ಲದಂತಾಗಿದೆ, ಸ್ವಪಕ್ಷೀಯ ನಾಯಕರ ವಿರುದ್ಧವೇ ಬಹಿರಂಗ ಹೇಳಿಕೆಗಳು ಹೊರಬೀಳ್ತಿವೆ. ಬಿಎಸ್ ವೈ ಮಾನಸಪುತ್ರ ಸಂತೋಷ್ ಟೀಂ ವಿರುದ್ದ ತಿರುಗಿಬಿದ್ದಿದ್ದು ವಿಜಯೇಂದ್ರ ಪರ ಬ್ಯಾಟ್ ಬೀಸ್ತಿದ್ದಾರೆ. ಯಡಿಯೂರಪ್ಪ ಹಾಗೂ ಬಿ.ಎಲ್.ಸಂತೋಷ್ ಬಣಗಳ ಫೈಟ್ ತಾರಕ್ಕೇರ್ತಿದ್ದು ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಾಗ್ತಿಲ್ಲ..
ವಿಧಾನಸಭೆ ಚುನಾವಣೆ ಹೀನಾಯ ಸೋಲಿನ ನಂತ್ರ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಕಟ್ಟೆಯೊಡೆದಿದೆ. ವರಿಷ್ಠರ ಭಯವೇ ಇಲ್ಲದಂತೆ ನಾಯಕರು ವರ್ತಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಸ್ಟೇಟ್ ಮೆಂಟ್ ನೀಡ್ತಿದ್ದಾರೆ ಅದ್ರಲ್ಲೂ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಕೋಲ್ಡ್ ವಾರ್ ಹೊರಬಿದ್ದಂತಾಗಿದೆ. ಪಕ್ಷದ ಸೋಲಿಗೆ ಯಡಿಯೂರಪ್ಪನೇ ಕಾರಣ ಅನ್ನೋದನ್ನ ಬಿ.ಎಲ್.ಸಂತೋಷ್ ತಮ್ಮ ಆಪ್ತರ ಮೂಲಕ ಹೊರಹಾಕಿಸ್ತಿದ್ದಾರೆ. ಮತ್ತೊಂದು ಕಡೆ ಸಂತೋಷ್ ನಡೆಗಳೇ ಪಕ್ಷದ ಈ ಸ್ಥಿತಿಗೆ ಕಾರಣ ಅನ್ನೋದನ್ನ ಯಡಿಯೂರಪ್ಪ ಕೂಡ ತಮ್ಮ ಆಪ್ತರ ಮೂಲಕ ಹೇಳಿಸ್ತಿದ್ದಾರೆ. ರಾಜ್ಯ ಬಿಜೆಪಿ ಮೇಲೆ ಹಿಡಿತ ಸಾದಿಸೋಕೆ ಇಬ್ಬರೂ ನಾಯಕರು ತೆರೆಮರೆಯಲ್ಲೇ ಪ್ರಯತ್ನ ಮುಂದುವರಿಸಿದ್ದಾರೆ.
ಕಳೆದ 2 ವಾರದಿಂದ ಸಂಸದ ಪ್ರತಾಪ್ ಸಿಂಹ,ಮಾಜಿ ಸಚಿವ ಸಿ.ಟಿ.ರವಿ, ವಿ. ಸೋಮಣ್ಣ ಪರೋಕ್ಷವಾಗಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿಕೆ ನೀಡ್ತಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆ ಬಿಎಸ್ ವೈ,ಬೊಮ್ಮಾಯಿ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡ್ತಿದ್ದಾರೆಂದು ಪರೋಕ್ಷವಾಗಿಯೇ ಮಾತಿನಲ್ಲೇ ತಿವಿದಿದ್ದೂ ಆಯ್ತು. ಇದ್ರ ನಡುವೆ ವಲಸಿಗರಿಂದಲೇ ಪಕ್ಷ ಹೀನಾಯವಾಗಿ ಸೋಲ್ತು ಅಂತ ಈಶ್ವರಪ್ಪ ಕೂಡ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸ್ತಿದ್ದ ಬಿಎಸ್ ವೈ ಇದೀಗ ತಮ್ಮ ಮಾನಸಪುತ್ರ ರೇಣುಕಾಚಾರ್ಯರನ್ನ ಮುಂದೆ ಬಿಟ್ಟಂತೆ ಕಾಣ್ತಿದೆ. ನಿನ್ನೆ ಟ್ವೀಟ್ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜೀನಾಮೆಗೆ ಒತ್ತಾಯಿಸಿದ್ದ ರೇಣುಕಾಚಾರ್ಯ ಇಂದು ಪರೋಕ್ಷವಾಗಿ ಬಿಎಲ್. ಸಂತೋಷ್,ಅಣ್ಣಾಮಲೈ,ಪ್ರಹ್ಲಾದ್ ಜೋಶಿಯವರ ವಿರುದ್ಧ ಗುಡುಗಿದ್ದಾರೆ. ಗ್ರಾಮಪಂಚಾಯ್ತಿ ಗೆಲ್ಲದವರು ನಮಗೆ ಮಾರ್ಗದರ್ಶನ ಮಾಡೋಕೆ ಬರ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇಣುಕಾಚಾರ್ಯರ ಈ ಬಹಿರಂಗ ಹೇಳಿಕೆ ಇದೀಗ ಪಕ್ಷದೊಳಗೆ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ..
ಇವತ್ತು ಬಿಜೆಪಿ ಪಕ್ಷದ ಸೋಲಿಗೆ ಕೆಲವು ಯಡವಟ್ಟು ನಿರ್ಧಾರಗಳು ಕೂಡ ಕಾರಣ ಇರಬಹುದು. ನಾವು ಎಡವಿದ್ದೆಲ್ಲಿ ಅನ್ನೋದು ನಾಯಕರಿಗೂ ಗೊತ್ತಿಲ್ಲದಿರುವುದೇನಲ್ಲ. ಆದ್ರೆ ಹೈಕಮಾಂಡ್ ಬಹಳ ಸ್ಟ್ರಾಂಗ್ ಇರೋದ್ರಿಂದ ಯಾರೂ ಮಾತನಾಡುವ ಪ್ರಯತ್ನ ಮಾಡಿರಲಿಲ್ಲ. ಒಳಗೆ ಅಸಮಾಧಾನವಿದ್ರೂ ಗೊತ್ತಿಲ್ಲದಂತೆ ಸುಮ್ಮನಿದ್ರು..ಯಾವಾಗ ಸಂತೋಷ್ ಟೀಂ ಮಾತನಾಡೋಕೆ ಶುರುಮಾಡ್ತೋ ಆಗಲೇ ಬಿಎಸ್ ವೈ ಟೀಂಕೂಡ ತಿರುಗೇಟು ನೀಡೋಕೆ ಶುರುಮಾಡಿದೆ. ಅದ್ರ ಭಾಗವೇ ರೇಣುಕಾಚಾರ್ಯ ಇಂದು ಸಂತೋಷ್,ಸುಧಾಕರ್,ಅಣ್ಣಾ ಮಲೈ ವಿರುದ್ಧ ಗುಡುಗಿದ್ದು. ಅಣ್ಣಾ ಮಲೈಗೆ ಏನುಗೊತ್ತಿದೆ ಅಂತವರನ್ನ ತಂದು ಉಸ್ತುವಾರಿ ಮಾಡ್ತೀರ,ಅವರಿಂದ ನಾವು ಮಾರ್ಗದರ್ಶನ ಮಾಡಿಸಿಕೊಳ್ಬೇಕಾ. ಸುಧಾಕರ್ ಸೋತಂಗೆ ನಾನೂ ಸೋತಿಲ್ವೇ ಅವರನ್ನ ಸಮಾಧಾನ ಮಾಡೋಕೆಹೋಗ್ತೀರ ನಾನು ನಿಮ್ಮ ಕಣ್ಣಿಗೆ ಕಾಣಲಿಲ್ವೇ. ಗ್ರಾಮಪಂಚಾಯ್ತಿಗೆಲ್ಲದ ಸಂತೋಷ್ ಇಂದಲೇ ಇಷ್ಟೆಲ್ಲಾ ಹಿನ್ನಡೆಯಾಯ್ತು ಅಂತ ಪರೋಕ್ಷವಾಗಿ ಕಿಡಿಕಾರಿದ್ದಾರೆ..ಈ ಮೂಲಕ ನಾನು ಯಾರಿಗೂ ಹೆದರೋನಲ್ಲ ಎನ್ನುವ ಮೂಲಕ ಹೈಕಮಾಂಡ್ ಕೂಡ ಲೆಕ್ಕಕ್ಕಿಲ್ಲ ಅನ್ನೋದನ್ನ ಹೇಳುವ ಪ್ರಯತ್ನ ಮಾಡಿದ್ದಾರೆ ರೇಣುಕಾಚಾರ್ಯ…
ಒಟ್ನಲ್ಲಿ ಬಿಜೆಪಿಯೊಳಗೆ ಆಂತರಿಕ ಭಿನ್ನಮತಗಳು ಒಂದೊಂದಾಗಿ ಬೆಳಕಿಗೆ ಬರ್ತಿವೆ. ಹೈಕಮಾಂಡ್ ಭಯದಿಂದ ಇಲ್ಲಿಯವರೆಗೆ ಸೈಲೆಂಟಾಗಿದ್ದ ನಾಯಕರು ಸೋತ ಮೇಲೆ ಹೈಕಮಾಂಡ್ ಕೂಡ ಲೆಕ್ಕವಿಲ್ಲವೆಂಬಂತೆ ವರ್ತಿಸ್ತಿದ್ದಾರೆ. ಸರ್ಕಾರದ ವಿರುದ್ಧ ತಿರುಗಿಬೀಳಬೇಕಾದ ಕೇಸರಿ ನಾಯಕರು ಸ್ವಪಕ್ಷೀಯರ ವಿರುದ್ಧವೇ ಬಂಡೇಳುತ್ತಿದ್ದಾರೆ. ಇದು ರಾಜ್ಯ ಬಿಜೆಪಿಗೆ ಮತ್ತಷ್ಟು ಮುಜುಗರ ತಂದಿಟ್ಟಿದೆ.
