ವಿಜಯಪುರ:- ಕೃಷ್ಣಾ ನದಿಯಲ್ಲಿ ಐವರು ನೀರು ಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಚರಣೆ ನಡೆಸಿ ಶವ ಪತ್ತೆ ಹಚ್ಚಿದ್ದು, ಇನ್ನುಳಿದವರಿಗೆ ಶೋಧ ಮುಂದುವರಿಸಿದ್ದಾರೆ.
ನೀರು ಪಾಲಾಗಿದ್ದ ಪುಂಡಲೀಕ ಯಂಕಂಚಿ, ತಯ್ಯಬ್ ಚೌಧರಿ (40), ಕೊಲ್ಹಾರ ಪಟ್ಟಣದ ನಿವಾಸಿ ದಶರಥ ಗೌಡರ್ (54) ಮೃತದೇಹ ಪತ್ತೆಯಾಗಿವೆ. ಆಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಶವಗಳನ್ನು ರವಾನೆ ಮಾಡಲಾಗಿದೆ. ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲೀಕಾರಗಾಗಿ ಅಗ್ನಿಶಾಮಕ ದಳ, ಪೊಲೀಸರಿಂದ ಶೋಧಕಾರ್ಯ ನಡೆದಿದೆ.
ಬಳೂತಿ ಜಾಕ್ವೆಲ್ ಬಳಿಯ ಕೃಷ್ಣ ನದಿ ತಟದಲ್ಲಿ ಎಂಟು ಜನರು ಇಸ್ಪೀಟ್ ಆಟವಾಡುತ್ತಿದ್ದರು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಾರೆಂಬ ಮಾಹಿತಿ ದೊರೆಯುತ್ತಿದ್ದಂತೆ ಭಯದಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ ನದಿಯ ತಟಕ್ಕೆ ಹೋಗುತ್ತಿದ್ದರು. ಆದರೆ, ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನಡು ನದಿಯಲ್ಲಿ ಮಗುಚಿ ಬಿದ್ದಿದೆ. ನಂತರ, ಕೊಲ್ಹಾರ ಪಟ್ಟಣದ ಸಚಿನ್ ಕಟಬರ ಈಜಿ ದಡ ಸೇರಿದ್ದಾನೆ. ಬಶೀರ್ ಹೊನವಾಡ ಎಂಬಾತ ಈಜಿ ದಡ ಸೇರಿ ಗುಪ್ತವಾಗಿ ಮನೆ ಸೇರಿದ್ದಾನೆ. ಸ್ಥಳದಲ್ಲೇ ಇದ್ದ ಜಗದೀಶ ಸುಣಗದ ಹಾಗೂ ಮುತ್ತು ಬಾನಿ ಎಂಬುವರು ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಫಾರುಖ ಫತ್ತೇಮಹದ್ ಎಂಬಾತನನ್ನು ರಕ್ಷಣೆ ಮಾಡಿದ್ದಾರೆ. ಉಳಿದ ಐವರು ನೀರು ಪಲಾಗಿದ್ದಾರೆ. ಐವರಲ್ಲಿ ಮೂವರ ಮೃತ ದೇಹ ಪತ್ತೆಯಾಗಿದೆ