ಭುವನೇಶ್ವರ: 288 ಜನರನ್ನು ಬಲಿ ಪಡೆದಿದ್ದ ಒಡಿಶಾ ರೈಲು ದುರಂತಕ್ಕೆ (Odisha Train Accident) ಸಿಗ್ನಲಿಂಗ್ (Signalling) ಮತ್ತು ಟ್ರಾಫಿಕ್ ಕಂಟ್ರೋಲ್ (Traffic Operations) ವಿಭಾಗಗಳನ್ನು ಹೊಣೆ ಮಾಡಲಾಗಿದೆ. ರೈಲ್ವೇ (Railway) ಸಿಗ್ನಲ್ ಹಾಗೂ ಇಂಟರ್ಲಾಕ್ ರಿಪೇರಿ ಮಾಡಿಸುವಂತೆ ಸ್ಟೇಷನ್ ಮಾಸ್ಟರ್ಗೆ ಸೂಚಿಸಲಾಗಿತ್ತು. ಸಿಗ್ನಲ್ ರಿಪೇರಿಯ ಬಳಿಕ ರೈಲು ಸಂಚರಿಸುವ ಮುನ್ನ ಸಿಗ್ನಲಿಂಗ್ ವ್ಯವಸ್ಥೆಯನ್ನು ಪರೀಕ್ಷಿಸುವ ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಲಾಗಿಲ್ಲ.
ಅಲ್ಲದೇ ರೈಲ್ವೇ ಮರುಸಂಪರ್ಕಕ್ಕೆ ಸೂಚನೆ ನೀಡಿದ ನಂತರವೂ ಸಿಗ್ನಲಿಂಗ್ ಸಿಬ್ಬಂದಿ ಕೆಲಸವನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಅಪಘಾತಕ್ಕೆ ಸಿಗ್ನಲ್ ನಿರ್ವಹಣೆ ಹಾಗೂ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ಜವಾಬ್ದಾರರಾಗಿದ್ದಾರೆ ಎಂದು ಸಿಆರ್ಎಸ್ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಗ್ನಲಿಂಗ್ ಸಿಬ್ಬಂದಿ ಮತ್ತು ಸ್ಟೇಷನ್ ಮಾಸ್ಟರ್ ಇಬ್ಬರೂ ಜವಾಬ್ದಾರರಾಗಿರುವ ಇಂಟರ್ಲಾಕಿಂಗ್ ಸಿಗ್ನಲಿಂಗ್ ಸಿಸ್ಟಮ್ನ ಕೇಂದ್ರ ಕೊಠಡಿಯಲ್ಲೂ ಲೋಪಗಳಾಗಿವೆ. ಇದಾದ ಬಳಿಕ ರೈಲ್ವೆ ಇಲಾಖೆ ಖರಗ್ಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶುಜತ್ ಹಶ್ಮಿ ಮತ್ತು ಆಗ್ನೇಯ ರೈಲ್ವೆ ಸುರಕ್ಷತಾ ಸಿಗ್ನಲ್ ಭದ್ರತಾ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಿದೆ.
ಆಗ್ನೇಯ ರೈಲ್ವೆ ಜನರಲ್ ಮ್ಯಾನೇಜರ್ ಅರ್ಚನಾ ಜೋಶಿ ಅವರನ್ನು ಬೆಂಗಳೂರಿನ ರೈಲ್ ವೀಲ್ ಪ್ಲಾಂಟ್ನ ಜನರಲ್ ಮ್ಯಾನೇಜರ್ ಆಗಿ ವರ್ಗಾವಣೆ ಮಾಡಲಾಗಿದೆ. ಈಶಾನ್ಯ ರೈಲ್ವೆಯ ಹೆಚ್ಚುವರಿ ಜನರಲ್ ಮ್ಯಾನೇಜರ್ ಎ.ಕೆ ಮಿಶ್ರಾ ಅವರನ್ನು ಆಗ್ನೇಯ ರೈಲ್ವೆಯ ಹೊಸ ಜಿಎಂ ಆಗಿ ನೇಮಿಸಿದೆ. ಈ ಸಂಬಂಧ ಆಗ್ನೇಯ ವಲಯದ ರೈಲ್ವೆ ಸುರಕ್ಷತಾ ಆಯುಕ್ತ ಎ.ಕೆ ಚೌಧರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.