ಪರಮಾಣು ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾಸಗಿ ಕಂಪನಿಗಳ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ವಲಯದಲ್ಲಿ ಹೂಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಕಂಪನಿಗಳನ್ನು ಆಹ್ವಾನಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಪವರ್, ಅದಾನಿ ಪವರ್ ಮತ್ತು ವೇದಾಂತ ಲಿಮಿಟೆಡ್ ಸೇರಿದಂತೆ ಕನಿಷ್ಠ ಐದು ಖಾಸಗಿ ಸಂಸ್ಥೆಗಳೊಂದಿಗೆ ಸರ್ಕಾರವು ಸುಮಾರು 2.16 ಲಕ್ಷ ರೂ. ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದೆ ಎಂದು ಈ ವಿಷಯದಲ್ಲಿ ನೇರವಾಗಿ ಭಾಗಿಯಾಗಿರುವ ಎರಡು ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಣು ಸಚಿವಾಲಯ ಮತ್ತು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಕಳೆದ ವರ್ಷದಲ್ಲಿ ಹೂಡಿಕೆ ಯೋಜನೆ ಕುರಿತು ಖಾಸಗಿ ಕಂಪನಿಗಳೊಂದಿಗೆ ಅನೇಕ ಸುತ್ತಿನ ಚರ್ಚೆಗಳನ್ನು ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಭಾರತದ (India) ಅಣು ಇಂಧನ ಕ್ಷೇತ್ರ ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲಿದೆ. ರಿಯಾಕ್ಟರ್ ನಿರ್ಮಾಣ, ಉತ್ಪಾದನೆ, ಇಂಧನ ನಿರ್ವಹಣೆಯು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಎನ್ಪಿಸಿಐಎಲ್ಗೆ ಇರಲಿದೆ.
ಹೊಸ ಖಾಸಗಿ ಹೂಡಿಕೆ ರಿಯಾಕ್ಟರ್ ಹೊರಗಿನ ನಿರ್ಮಾಣ, ಭೂಮಿ ಖರೀದಿ, ನೀರು ಮತ್ತು ಇತರೆ ಮೂಲಸೌಕರ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿದೆ. ಹೂಡಿಕೆ ಮಾಡಿದ ಕಂಪನಿಗಳು ವಿದ್ಯುತ್ ಮಾರಾಟದ ಲಾಭ ಪಡೆದುಕೊಳ್ಳಲಿದೆ. ಹಾಲಿ ಅಣುಶಕ್ತಿ ಸಾಮರ್ಥ 7,500 ಮೆಗಾ ವ್ಯಾಟ್ ಇದ್ದು, 2040ರ ವೇಳೆಗೆ 11,000 ಮೆ.ವ್ಯಾ.ಗೆ ಏರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಯೋಜನೆಯು ಇನ್ನೂ ಅಂತಿಮ ಹಂತದಲ್ಲಿದೆ .
ಈ ಯೋಜನೆಗೆ 1962 ರ ಭಾರತದ ಪರಮಾಣು ಶಕ್ತಿ ಕಾಯ್ದೆಗೆ ಯಾವುದೇ ತಿದ್ದುಪಡಿ ಮಾಡುವ ಅಗತ್ಯವಿಲ್ಲ. ಪರಮಾಣು ವಿದ್ಯುತ್ ಸ್ಥಾವರಗಳನ್ನು ಖಾಸಗಿ ಕಂಪನಿಗಳು ಸ್ಥಾಪಿಸುವುದಕ್ಕೆ ಭಾರತೀಯ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಘಟಕಗಳು, ಉಪಕರಣಗಳನ್ನು ಪೂರೈಸಲು ಮತ್ತು ರಿಯಾಕ್ಟರ್ಗಳ ಹೊರಗಿನ ಕೆಲಸಕ್ಕೆ ಕಾಯ್ದೆಯಲ್ಲಿ ಅವಕಾಶವಿದೆ.