ನವದೆಹಲಿ: ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್ ಪ್ರಸಾರಕ್ಕಾಗಿ 18 ಒಟಿಟಿ ಪ್ಲಾಟ್ಫಾರ್ಮ್ಗಳಿಗೆ (OTT Platform) ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. 19 ವೆಬ್ಸೈಟ್ಗಳು, 10 ಅಪ್ಲಿಕೇಶನ್ಗಳು (ಗೂಗಲ್ ಪ್ಲೇ ಸ್ಟೋರ್ನಲ್ಲಿ 7, ಆ್ಯಪಲ್ ಆಪ್ ಸ್ಟೋರ್ನಲ್ಲಿ 3), ಒಟಿಟಿ ಪ್ಲಾಟ್ಫಾರ್ಮ್ಗಳ 57 ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ರಾಷ್ಟ್ರವ್ಯಾಪಿ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಐಟಿ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್, ಸೃಜನಶೀಲ ಅಭಿವ್ಯಕ್ತಿಯ ಸೋಗಿನಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ನಿಂದನೆ ವಿಷಯಗಳನ್ನು ಪ್ರಚಾರ ಮಾಡಬಾರದು ಎಂದು ವೇದಿಕೆಗಳ ಜವಾಬ್ದಾರಿ ಕುರಿತು ಪದೇ ಪದೇ ಒತ್ತಿಹೇಳಿದ್ದಾರೆ.
ಸೃಜನಶೀಲ ಅಭಿವ್ಯಕ್ತಿ ಹೆಸರಿನಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳು ಅಶ್ಲೀಲತೆ, ಅಸಭ್ಯ ಕಂಟೆಂಟ್ಗಳನ್ನು ಪ್ರಸಾರ ಮಾಡದಂತೆ ನೋಡಿಕೊಳ್ಳುವುದು ಆಯಾ ಪ್ಲಾಟ್ಫಾರ್ಮ್ ಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಠಾಕೂರ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ, ಯಾವುದೇ ಕಂಟೆಂಟ್ ಭಾರತದ ಸಂಸ್ಕೃತಿಯನ್ನು ಅವಮಾನಿಸದಂತೆ ಸಂವೇದನಾಶೀಲವಾಗಿರಬೇಕು ಎಂದು ಪ್ಲಾಟ್ಫಾರ್ಮ್ಗಳಿಗೆ ಸಚಿವರು ಮನವಿ ಮಾಡಿದ್ದರು.