ವಿದೇಶದಲ್ಲಿದ್ದುಕೊಂಡು ಭಾರತದ ವಿರುದ್ಧ ಕಿತಾಪತಿ ಮಾಡುತ್ತಿರುವ ಖಲಿಸ್ತಾನ್ ಉಗ್ರರಿಗೆ (Khalistan Terrorist) ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಈಗ ಮುಂದಾಗಿದೆ.
ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಎಲ್ಲಾ ಖಲಿಸ್ತಾನಿ ಉಗ್ರರನ್ನು ಪತ್ತೆ ಹಚ್ಚಿ ಅವರ ಒಸಿಐ ಕಾರ್ಡ್ (OCI Card) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗೆ ಸೂಚಿಸಿದೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರ ಒಸಿಐ ಕಾರ್ಡ್ ರದ್ದುಗೊಳಿಸಿದರೆ ಅವರು ಮರಳಿ ಭಾರತಕ್ಕೆ ಬರಲು ಸಾಧ್ಯವಿಲ್ಲ.
ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು (Gurpatwant Singh Pannu) ಭಾರತದಲ್ಲಿ ಹೊಂದಿದ್ದ ಆಸ್ತಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಮುಟ್ಟುಗೋಲು ಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ವಿದೇಶದಲ್ಲಿ ನೆಲೆಸಿರುವ ಇತರೇ ಖಲಿಸ್ತಾನ್ ಉಗ್ರರ ಆಸ್ತಿ ಮುಟ್ಟುಗೋಲು ಹಾಕಲು ಸೂಚಿಸಿದೆ.
ಚಂಡಿಗಢ ಮತ್ತು ಅಮೃತಸರದಲ್ಲಿ ಗುರುಪತ್ವಂತ್ ಸಿಂಗ್ ಪನ್ನು ಹೊಂದಿದ್ದ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿದ ಬಳಿಕ ಸರ್ಕಾರ ಈಗ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಏನಿದು ಒಸಿಐ ಕಾರ್ಡ್?
ಭಾರತೀಯ ಮೂಲದ ವಿದೇಶಿ ಪ್ರಜೆಗೆ ಭಾರತ ನೀಡಿದ ಕಾನೂನಿನ ಸ್ಥಾನಮಾನ ಓಸಿಐ. ಇದರಿಂದಾಗಿ ವ್ಯಕ್ತಿಗೆ ಭಾರತದ ಶಾಶ್ವತ ಪ್ರಜೆ ಎಂಬ ಸ್ಥಾನ ಸಿಗುವುದಾದರೂ ಪೌರತ್ವ ಸಿಗುವುದಿಲ್ಲ. ವೀಸಾ ಹೊಂದಿರುವವರಿಗಿಂತ ಓಸಿಐ ಕಾರ್ಡ್ ಹೆಚ್ಚಿನ ಪ್ರಯೋಜನ ನೀಡುತ್ತದೆ ಶಾಶ್ವತವಾಗಿ ಭಾರತದ ವೀಸಾ ಇವರಿಗೆ ಇರುತ್ತದೆ. ಎಷ್ಟು ಬಾರಿ ಬೇಕಾದರೂ ಇವರು ಭಾರತಕ್ಕೆ ಬರಬಹುದು. ಇಲ್ಲಿ ವಾಸ, ಕೆಲಸ ಹಾಗೂ ವ್ಯಾಪಾರವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದುವರಿಸಬಹುದು.