ನವದೆಹಲಿ : ನಂದಿನಿ ಪ್ಯಾಕೇಟ್ ಮೇಲಿನ ಹಿಂದಿ ಹೇರಿಕೆ ವಿರುದ್ದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡಿಗರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ, ನಂದಿನಿ ಮೊಸರು ಪ್ಯಾಕೆಟ್ ಮೇಲೆ ಮುದ್ರಿಸುವ ದಹಿ ಪದದ ಆದೇಶವನ್ನು ಹಿಂಪಡೆದಿದೆ.
ಇದು ದಕ್ಷಿಣ ಭಾರತದ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆಯ ವಿರುದ್ದ ಕರ್ನಾಟಕ, ತಮಿಳುನಾಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಂದಿನಿ ನಮ್ಮದು ಎನ್ನುವ ಅಭಿಯಾನವನ್ನು ನಡೆಸಿತ್ತು.
ದೇಶದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಲ್ಲಾ ರಾಜ್ಯಗಳ ಹಾಲು ಸಹಕಾರ ಸಂಘ ಕಡ್ಡಾಯವಾಗಿ ದಹಿ ಎಂದು ಮುದ್ರಿಸಲು ಆದೇಶಿಸಿತ್ತು. ಹೀಗಾಗಿ ನಂದಿನಿ ಮೊಸರು ಪ್ಯಾಕೇಟ್ ಮೇಲೆ ಹಿಂದಿ ಭಾಷೆಯಲ್ಲಿ ದಹಿ ಅನ್ನುವ ಪದ ಬಳಕೆ ಮಾಡಲಾಗಿತ್ತು. ಇದು ದಕ್ಷಿಣ ಭಾರತದ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆಯಾಗಿದ್ದು, ಇದರ ವಿರುದ್ದ ಕರ್ನಾಟಕ, ತಮಿಳುನಾಡಿನ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ನಂದಿನಿ ನಮ್ಮದು ಎನ್ನುವ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳನ್ನು ನಡೆಸಿದ್ದರು.
ಇದಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಇದರ ವಿರುದ್ದ ಸರಣ ಟ್ವೀಟ್ ಮಾಡಿದ್ದು, ಟ್ವೀಟ್ ಗಳ ಮೂಲಕ ಆಕ್ರೋಶ ಹೊರಹಾಕಿದ್ದರು. ಇದಲ್ಲದೇ ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೂಡ ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಈ ಎಲ್ಲಾ ವಿರೋಧಗಳು ಆಕ್ರೋಶಗಳು ಹಾಗೂ ಕನ್ನಡಿಗರ ನಿರಂತರ ಹೋರಾಟಕ್ಕೆ ಮಣಿದ ಎಫ್ಎಸ್ಎಸ್ಎಐ ತನ್ನ ಆದೇಶವನ್ನು ಹಿಂಪಡೆದಿದೆ. ಈ ಕುರಿತು ಎಫ್ಎಸ್ಎಸ್ಎಐ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮೊಸರು ಪ್ಯಾಕೆಟ್ ಮೇಲೆ ಇಂಗ್ಲಿಷ್ ಜೊತೆ ಪ್ರಾದೇಶಿಕ ಭಾಷೆ ಬಳಕೆಗೆ ಅವಕಾಶ ನೀಡಿದೆ. ಎಂದಿನಂತೆ ಕರ್ಡ್ ಜೊತೆಗೆ ಕನ್ನಡದಲ್ಲಿ ಮೊಸರು, ಪೆರಗು, ಥಾಯಿರ್ ಪದಗಳನ್ನು ಮುದ್ರಿಸಬಹುದಾಗಿದೆ.