ನವದೆಹಲಿ: ಚಂದ್ರಯಾನ-3 (Chandrayaan-3) ಸಕ್ಸಸ್ಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಚಂದ್ರಯಾನ-3 ರಲ್ಲಿ ಕಳುಹಿಸಿರುವ ವಿಕ್ರಮ್ ಲ್ಯಾಂಡರ್, ಚಂದ್ರಯಾನ-2 ನಲ್ಲಿ ಕಳುಹಿಸಿದ್ದ ಆರ್ಬಿಟರ್ (Ch-2 orbiter) ಸಂಪರ್ಕ ಸಾಧಿಸಿದೆ. ಚಂದ್ರಯಾನ-2 ಆರ್ಬಿಟರ್ನೊಂದಿಗೆ ಸಂಪರ್ಕ ಸಾಧಿಸಿರುವ ಮಾಹಿತಿಯನ್ನು ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
2019ರಲ್ಲಿ ಇಸ್ರೋ (ISRO) ಚಂದ್ರಯಾನ-2 ಯೋಜನೆ ಆರಂಭಿಸಿದಾಗ ಅದರ ಆರ್ಬಿಟರ್ ಅನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿತ್ತು. ಆದರೆ, ಇದರ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ವಿಫಲವಾಗಿದ್ದರಿಂದ ಸಂವಹನ ಕಡಿತಗೊಂಡಿತ್ತು. ಕಳೆದ 5 ವರ್ಷಗಳಿಂದ ಏಕಾಂಗಿಯಾಗಿ ಚಂದ್ರನ ಕಕ್ಷೆ ಸುತ್ತುತ್ತಿದ್ದ ಈ ಆರ್ಬಿಟರ್ ವಿಕ್ರಮ್ ಲ್ಯಾಂಡರ್ನ (Vikram Lander) ಸಂಪರ್ಕ ಸಿಕ್ಕಿದೆ. ಕಳೆದ ಬಾರಿ ಕಳುಹಿಸಿದ್ದ ಆರ್ಬಿಟರ್ ಸುಸ್ಥಿತಿಯಲ್ಲಿದ್ದ ಕಾರಣ ಈ ಬಾರಿ ಕೇವಲ ಲ್ಯಾಂಡರ್ ಮತ್ತು ರೋವರ್ ಅನ್ನು ಕಳುಹಿಸಿತ್ತು. ಈ ಎರಡರ ಸಂಪರ್ಕ ಇಸ್ರೋಗೆ ತಾಂತ್ರಿಕ ಬಲ ಸಿಕ್ಕಾಂತಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಚಂದ್ರಯಾನ-3 ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಈ ಪ್ರಕ್ರಿಯೆ ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಜಗತ್ತಿನ 4ನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.