ಅದು ಬರೋಬ್ಬರಿ ಮೂವತ್ತು ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಅನಾಥ ಮಕ್ಕಳ ಆಶ್ರಯತಾಣ. ಈವರೆಗೂ ಅಲ್ಲಿ ವಿಕಲಚೇತನರು ಅಷ್ಟೇ ಅಲ್ಲ ಹೆಚ್ ವಿ ಪೀಡಿತರ ಮಕ್ಕಳು ಸಹ ಆಶ್ರಯ ಪಡೆದುಕೊಂಡಿದ್ದಾರೆ. ಆದ್ರೆ ಇದೀಗ ಆ ಆಶ್ರಯತಾಣದ ಏಕಾಏಕಿ ಬಂದ್ ಆಗ್ತಿದೆ. ಇದ್ರಿಂದಾಗಿ ಇಷ್ಟು ದಿನಗಳ ಕಾಲ ಈ ತಾಣದಲ್ಲಿ ಅನ್ನ-ನೀರುಂಡಿದ್ದ ಎಪ್ಪತ್ತಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಅಷ್ಟಕ್ಕೂ ಆ ಆಶ್ರಯತಾಣ ಇರೋದಾದ್ರು ಎಲ್ಲಿ? ಇದ್ದಕ್ಕಿದ್ದಂತೆ ಆ ಸಂಸ್ಥೆ ಬಂದ್ ಆಗೋಕೆ ಕಾರಣವಾದ್ರು ಏನು? ಈ ಕುರಿತ ಸ್ಪೇಷಲ್ ರಿಪೋರ್ಟ್ ಇದೆ ಬನ್ನಿ ನೋಡ್ಕೊಂಡ್ ಬರೋಣ
ಹೌದು ದೂರದ ಆಸ್ಟ್ರೀಯಾ ದೇಶದ ಸಂಸ್ಥೆಯೊಂದರ ದೇಣಿಗೆ ಹಣದಿಂದ ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕ ರಾಜ್ಯದ ಸಂಗೀತಕಾಶೀ ಗದಗನ ಬೆಟಗೇರಿಯ ಸಿಎಸ್ ಐ ಸಂಸ್ಥೆ ವತಿಯಿಂದ ನಡೆಯುತ್ತಿದ್ದ ಪ್ರೇಮನಿಲಯದ ಬಗ್ಗೆ ನಾವು ಇದೀಗ ನಿಮಗೆ ಹೇಳ್ತಾಯಿರೋದು. ಈ ಪ್ರೇಮನಿಲಯ ಹೆಸರೇ ಹೇಳುವಂತೆ 1993ರಿಂದಲೂ ಅನೇಕ ಮಕ್ಕಳಿಗೆ ಪ್ರೀತಿ-ಪ್ರೇಮ ಹಂಚಿ ಬೆಳೆಸಿ ಹರಸಿ ಹಾರೈಸುತ್ತಾ ಬಂದಿತ್ತು. ಆದ್ರೆ ಇದೀಗ ಸಿಎಸ್ ಐ ಸಂಸ್ಥೆಯು ಪ್ರೇಮನಿಲಯದ ಜಾಗೆಯಲ್ಲಿ ಮಾನಸಿಕ ಅಸ್ವಸ್ಥರಿಗಾಗಿ ಕೇಂದ್ರ ಮಾಡಲು ನಿರ್ಧರಿಸಿದೆ ಎನ್ನುವ ನೆಪದಲ್ಲಿ ಪ್ರೇಮನಿಲಯವನ್ನು ಬಂದ್ ಮಾಡ್ತಾಯಿದೆ. ಪರಿಣಾಮ 13ಜನ ಹೆಚ್ ಐ ವಿ ಪೀಡಿತರ ಮಕ್ಕಳು ಸೇರಿ ಎಪ್ಪತ್ತಕ್ಕೂ ಅಧಿಕ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಇದು ಮಕ್ಕಳ ಆತಂಕಕ್ಕೆ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ಇನ್ನು ಈ ಬಗ್ಗೆ ಇಲ್ಲಿನ ಆಡಳಿತ ಮಂಡಳಿಯವರನ್ನ ಕೇಳಿದ್ರೆ ಮಕ್ಕಳಿಗೆ ಯಾವ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ಇದೇ ತರಹದ ಮಕ್ಕಳಿಗಾಗಿಯೇ ಕೊಪ್ಪಳ ಹಾಗೂ ಬೆಂಗಳೂರಿನಲ್ಲಿರುವ ಹಾಸ್ಟೆಲ್’ಗಳಿಗೆ ಮಕ್ಕಳನ್ನು ಕಳುಹಿಸ್ತಿವಿ. ಕೆಲ ಮಕ್ಕಳನ್ನು ಪಾಲಕರೇ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಇದು ಪ್ರೈವೇಟ್ ಪಾಲಿಸಿ ಆಗಿರೋದ್ರಿಂದ ಸಂಸ್ಥೆ ಇದೇ ಜಾಗದಲ್ಲಿ ಮೆಂಟಲ್ ಹೆಲ್ತ ಸೆಂಟರ್ ಮಾಡುವ ನಿರ್ಧಾರದಲ್ಲಿದೆ ಅಂತಾರೆ. ಇದಕ್ಕೆ ಸುತಾರಾಂ ಒಪ್ಪದ ಗದಗನ ಕೆಲ ಸಂಘಟನೆಗಳು ನಿಮ್ಮ ಸಂಸ್ಥೆಯ ಕಟ್ಟಡವನ್ನು ನಮಗೆ ಕೊಡಿ ನಾವೇ ಗದಗ ಜನ್ರ ಸಹಾಯದಿಂದ ಮಕ್ಕಳನ್ನು ಪೋಷಣೆ ಮಾಡ್ತಿವಿ ಅಂತಾರೆ
ಒಟ್ನಲ್ಲಿ ಬಡವ ಬಲ್ಲಿದರ ಬಾಳಿಲ್ಲಿ ಬೆಳಕು ಮೂಡಿಸಿದ್ದ ಸಂಸ್ಥೆಯು ತನ್ನ ಕಾರ್ಯವನ್ನ ಸ್ಥಗಿತಗೊಳಿಸುತ್ತಿರುವ ಪರಿಣಾಮ ಸಬಲರಾಗಿರದ ಮಕ್ಕಳು ಸಂಕಟ ಅನುಭವಿಸುವಂತಾಗಿದ್ದು ಸಂಸ್ಥೆಯ ನಿರ್ಧಾರ ಇದೇ ಅಂತಿಮವಾಗಿದ್ದಲ್ಲಿ ಸಾರ್ವಜನಿಕರೇ ಈ ಮಕ್ಕಳ ಸಹಾಯಕ್ಕೆ ಮುಂದಾಗಲಿ ಸಂಕಟದಲ್ಲಿರುವ ಸಣ್ಣಸಣ್ಣ ಮಕ್ಕಳನ್ನು ಸಂರಕ್ಷಣೆ ಮಾಡಲೆಂಬುದು ಸಮಾಜಸೇವಕರ ಅಭಿಪ್ರಾಯ.