ನವದೆಹಲಿ: ಐಎನ್ಡಿಐಎ ಒಕ್ಕೂಟ ಸರ್ಕಾರ ರಚನೆಗೆ ಹಕ್ಕು ಮಂಡಿಸದೇ ಇರಬಹುದು. ಆದರೆ, ಮುಂದೆ ಮಂಡಿಸುವುದಿಲ್ಲ ಎಂದು ಇದರರ್ಥವಲ್ಲ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವರಿಷ್ಠೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಾಧ್ಯಮಗಳಿಗೆ ಮಾತನಾಡಿರುವ ಮಮತಾ, ” ಇಂದು ಇಂಡಿಯಾ ಬಣವು ಸರ್ಕಾರ ರಚಿಸಲು ಹಕ್ಕು ಮಂಡಿಸದಿದ್ದರೆ, ನಾಳೆ ಅದನ್ನು ಮಾಡುವುದಿಲ್ಲ ಎಂದು ಅರ್ಥವಲ್ಲ.
ನಾವು ಕಾಯುತ್ತಿದ್ದೇವೆ ಮತ್ತು ಕಾದು ನೋಡುತ್ತಿದ್ದೇವೆ. ಅವಕಾಶಕ್ಕಾಗಿ ಕಾಯೋಣ ಎಂದಿದ್ದಾರೆ. ದೇಶಕ್ಕೆ ಬದಲಾವಣೆ ಬೇಕು. ಯಾರಿಗೂ ನರೇಂದ್ರ ಮೋದಿ ಬೇಡ. ಈ ಬಾರಿ ಸೋಲಿನ ನಂತರ ಮೋದಿ ಅವರು ಬೇರೆಯವರಿಗೆ ಜವಾಬ್ದಾರಿ ನೀಡಬೇಕಿತ್ತು. ಆದರೆ, ಅವರೇ ಮತ್ತೆ ಪ್ರಧಾನಿಯಾಗಿ ಮುಂದುವರೆಯುತ್ತಿದ್ದಾರೆ.
ದುರಾದೃಷ್ಟಕರ ಸಂಗತಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈಗಿನ ಸರ್ಕಾರ ಮೊದಲು ತಮ್ಮ ಸಮತೋಲನವನ್ನು ಕಾಯ್ದುಕೊಳ್ಳಲಿ. ತಮ್ಮ ಮೈತ್ರಿ ಪಕ್ಷಗಳನ್ನು ಎಷ್ಟರ ಮಟ್ಟಿಗೆ ತೃಪ್ತಿಪಡಿಸುತ್ತಾರೆ ಎಂದು ನಾವು ಕಾದು ನೋಡುತ್ತೇವೆ. ವ್ಯತ್ಯಾಸ, ಭಿನ್ನಾಭಿಪ್ರಾಯಗಳ ಬಳಿಕ ಮನೆಗೆ ಹೋಗಬೇಕು, ಕೆಲವು ದಾನ, ಧ್ಯಾನ ಮಾಡಬೇಕು. ಅಂತಿಮವಾಗಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.