ಬೆಂಗಳೂರು:- ಪತ್ನಿಯನ್ನು ವಿವಸ್ತ್ರಗೊಳಿಸಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಚುನ್ನು ಹನ್ಸದ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚುನ್ನು ಹನ್ಸದ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಹತ್ಯೆ ಮಾಡಿದ್ದ. ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಎಸ್. ಶ್ರೀಧರ್ ಅವರು ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ಗಳಾದ ರಾಜ ಹಾಗೂ ಮಹಾದೇವ ಗಡದ ಪ್ರಕರಣದಲ್ಲಿ ವಾದ ಮಂಡಿಸಿದ್ದರು.
ಚುನ್ನು ಹನ್ಸದ್ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ, ಸಾಕ್ಷಿದಾರರ ವಿಚಾರಣೆ ನಡೆಸಿತ್ತು. ಚುನ್ನು ಅಪರಾಧಿ ಎಂಬುದು ಸಾಬೀತಾಗಿದ್ದರಿಂದ, ಜೀವಾವಧಿ ಶಿಕ್ಷೆ ಹಾಗೂ ರೂ25 ಸಾವಿರ ದಂಡ ವಿಧಿಸಿದೆ.
ಇನ್ನೂ ಚುನ್ನು ಹನ್ಸದ್, ತಮ್ಮ ಊರಿನಲ್ಲೇ 25 ವರ್ಷದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಮಹಿಳೆಗೂ ಅದು ಎರಡನೇ ಮದುವೆಯಾಗಿತ್ತು. ಕೆಲಸ ಹುಡುಕಿಕೊಂಡು ಇಬ್ಬರೂ ಬೆಂಗಳೂರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದರು. ಇವರು ಹೊಸಕೋಟೆ ಸಮೀಪ ದೊಡ್ಡ ಹುಲ್ಲೂರು ಗ್ರಾಮದಲ್ಲಿ ಕಾರ್ಮಿಕರ ಶೆಡ್ನಲ್ಲಿ ವಾಸವಿದ್ದರು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿ ಯುವಕರ ಜೊತೆ ಪತ್ನಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ್ದ ಚುನ್ನು ಹನ್ಸದ್, ಪತ್ನಿಯೊಂದಿಗೆ ಜಗಳ ವಾಡುತ್ತಿದ್ದ ಎನ್ನುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿತ್ತು.