ಮಂಗಳೂರು: ಸರ್ಕಾರ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ಕೊಟ್ಟ ಬೆನ್ನಲ್ಲೇ ಮಂಗಳೂರಿನ (Mangaluru) ಉಳ್ಳಾಲ (Ullala) ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ರೂ. ವಿದ್ಯುತ್ ಬಿಲ್ (Electricity Bill) ಬಂದಿದ್ದು, ಮಾಲೀಕ ಬಿಲ್ ನೋಡಿ ಶಾಕ್ ಆಗಿದ್ದಾರೆ. ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರಿಗೆ ಪ್ರತಿ ತಿಂಗಳು 3,000 ವಿದ್ಯುತ್ ಬಿಲ್ ಬರುತ್ತಿತ್ತು. ಇದೀಗ ಮೇ ತಿಂಗಳ ಹೊಸ ಬಿಲ್ ಬಂದಿದ್ದು, ಅದರಲ್ಲಿ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ ಎಂದು ಬರೋಬ್ಬರಿ 7,71,072 ರೂ. ಕಟ್ಟಬೇಕು ಎಂದು ಬಿಲ್ ನೀಡಲಾಗಿದೆ. ಬಿಲ್ ಮೊತ್ತ ನೋಡಿ ಶಾಕ್ ಆದ ಸದಾಶಿವ ಆಚಾರ್ಯ ಅವರು ಬಿಲ್ ರೀಡರ್ ಬಳಿ ಈ ಬಗ್ಗೆ ಕೇಳಿದ್ದಾರೆ. ಆಗ ಬಿಲ್ ರೀಡರ್ ಅದನ್ನೆಲ್ಲಾ ಮೆಸ್ಕಾಂ (MESCOM) ಕಚೇರಿಯಲ್ಲಿ ಕೇಳಿ ಎಂದಿದ್ದಾರೆ.
ಈ ಕುರಿತು ಸದಾಶಿವ ಆಚಾರ್ಯ ಅವರು ಮೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ತಮ್ಮ ತಪ್ಪನ್ನು ಅರಿತುಕೊಂಡು 2,833 ರೂ. ಮೌಲ್ಯದ ಪರಿಷ್ಕೃತ ಬಿಲ್ ಅನ್ನು ನೀಡಿದ್ದಾರೆ ಎಂದು ಸದಾಶಿವ ಆಚಾರ್ಯ ಅವರು ತಿಳಿಸಿದ್ದಾರೆ. ಈ ಕುರಿತು ಮೆಸ್ಕಾಂ ಉಳ್ಳಾಲ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ್ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್ ಮಾಡಿಸಿ ಬಿಲ್ ನೀಡಲಾಗುತ್ತದೆ. ಬಿಲ್ಗಳಲ್ಲಿ ಲೋಪ ಕಂಡುಬಂದರೆ ಅಂತಹದ್ದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಸಿಬ್ಬಂದಿ ತಿಳಿಯದೇ ಬಿಲ್ ಅನ್ನು ಕೊಟ್ಟಿದ್ದಾರೆ. ವಿಚಾರ ತಿಳಿದ ತಕ್ಷಣ ತಪ್ಪನ್ನು ಸರಿಪಡಿಸಿ ಪರಿಷ್ಕೃತ ಬಿಲ್ ಅನ್ನು ವಿತರಿಸಲಾಗಿದೆ ಎಂದು ತಿಳಿಸಿದರು.